ಕೋರ್ಟ್ ಒಳಗಡೆ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನ್ಯಾಯಾಲಯದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದವರನ್ನು ಪುತ್ತೂರು ತಾಲೂಕಿನ ಕಾವು ಮಾಡ್ನೂರು ಗ್ರಾಮದ ನಿವಾಸಿ ರವಿ ಎಂದು ಗುರುತಿಸಲಾಗಿದೆ.
ನಿನ್ನೆ ಪುತ್ತೂರು ಕಾವು ಮಾಡ್ನೂರು ಗ್ರಾಮದ ನಿವಾಸಿ ರವಿ ಎಂಬವರ ವಿರುದ್ದ ಇವರ ಪತ್ನಿಯೇ ವೈವಾಹಿಕ ಮನಸ್ತಾಪದ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ರವಿರವರು ಪುತ್ತೂರು ನ್ಯಾಯಾಲಯದ ಸಂಕೀರ್ಣಕ್ಕೆ ತೆರಳಿ ನ್ಯಾಯಾಲಯದ ಒಳಗೆ ಪ್ರವೇಶಿಸಿ, ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ರವಿಯವರನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಸರಕಾರಿ ಆಸ್ಪತ್ರೆ ಪುತ್ತೂರು ಇಲ್ಲಿಗೆ ದಾಖಲಿಸಿದ್ದು , ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ.
ನ್ಯಾಯಾಲಯದ ಸಂಕೀರ್ಣದಲ್ಲಿ ಸದ್ರಿ ಘಟನೆ ನಡೆದಿರುವುದರಿಂದ ಮಾನ್ಯ ನ್ಯಾಯಾಲಯದ ನ್ಯಾಯಾಧೀಶರು ಸ್ವಯಂ ದೂರನ್ನು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಪೊಲೀಸ್ ಇಲಾಖೆ ತಿಳಿಸಿದೆ.



