Wednesday, January 28, 2026
Google search engine

Homeರಾಜ್ಯಡಾ.ಬಿ.ಆರ್.ಅಂಬೇಡ್ಕರ್ ಅವರು ಕಷ್ಟದ ಕುಲುಮೆಯಲ್ಲಿ ಅರಳಿದ ಕಮಲ : ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು

ಡಾ.ಬಿ.ಆರ್.ಅಂಬೇಡ್ಕರ್ ಅವರು ಕಷ್ಟದ ಕುಲುಮೆಯಲ್ಲಿ ಅರಳಿದ ಕಮಲ : ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು

ಮೈಸೂರು : ಸಮಸಮಾಜ ನಿರ್ಮಿಸುವ ನಿಟ್ಟಿನಲ್ಲಿ ತಮಗೆ ಎದುರಾದ ಕಷ್ಟಗಳನ್ನೇ ಪರಿವರ್ತಿಸಿಕೊಂಡು ಜಗತ್ತಿಗೇ ದಾರಿದೀಪವಾದ ತಪಸ್ವೀ ಡಾ.ಬಿ.ಆರ್.ಅಂಬೇಡ್ಕರ್ ಎಂದು ಸಂಸತಿ ಮತ್ತು ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ಹೇಳಿದರು.

ಕರ್ನಾಟಕ ಸಂಸತ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಶ್ರೀ ಅರಮನೆ ಜಪದಕಟ್ಟೆ ಮಠದ ಶ್ರೀ ಶಂಕರ ವಿಲಾಸ ಸಂಸತ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ವಿಚಾರಧಾರೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ಕಷ್ಟದ ಕುಲುಮೆಯಲ್ಲಿ ಅರಳಿದ ಸಾಮರ್ಥ್ಯದ ಕಮಲ, ಜ್ಞಾನಕ್ಕೆ ದಾಸ. ಎದೆಯ ಬೆಂಕಿಗೆ ಸುರಿದ ತುಪ್ಪವನ್ನೇ ಉರಿಸಿ ಜ್ಞಾನದ ಜ್ವಾಲೆಯಿಂದ ಆವಿರ್ಭವಿಸಿದ ಸಂತನಂತೆ ಜಗತ್ತಿಗೇ ಬೆಳಕಾಗಬಲ್ಲ ಭಾರತೀಯ ಸಂವಿಧಾನವನ್ನು ನೀಡಿದವರು ಬಾಬಾ ಸಾಹೇಬ್ ಎಂದರು.

ಮುಂದುವರೆದು ಜಗತ್ತಿನಲ್ಲಿ ಮೊದಲು ಋಷಿ ಸಂಸತಿ ನಂತರ ಕೃಷಿ ಸಂಸತಿ ಬೆಳೆಯಿತು. ಆದರೆ ಆಧುನಿಕ ಜಗತ್ತಿನಲ್ಲಿ ಖುಷಿ ಸಂಸತಿ ಬೆಳೆದು ಎಲ್ಲವೂ ಹುಸಿಯಾಗುವತ್ತ ಸಾಗಿದೆ. ಮನುಷ್ಯನಿಗೆ ಪದವಿ, ಜಾತಿ ಕುಲ, ಅಧಿಕಾರ ಕಾರು ಬಂಗಲೆ ಇವೆಲ್ಲಾ ತೋರಣವಿದ್ದಂತೆ. ತೋರಣ ಕಟ್ಟುವ ಭರದಲ್ಲಿ ಬದುಕಿನ ಹೂರಣವನ್ನೇ ಮರೆಯಬಾರದು ಎಂದರು.

ಬಳಿಕ ಕರ್ನಾಟಕ ಸಂಸತ ವಿಶ್ವವಿದ್ಯಾಲಯದ ಪ್ರಸಾರಾಂಗ ಉಪನಿರ್ದೇಶಕ ಡಾ.ಬಿ.ಗೋವಿಂದ ಮಾನನಾಡಿ, ಅಂಬೇಡ್ಕರ್ ಅವರು ದಲಿತರ, ಹಿಂದುಳಿದವರ ಏಳಿಗೆಯ ಕನಸು ಕಂಡವರು. ಅವರು ತೋರಿದ ದಾರಿ ಸಮಾಜದ ಎಲ್ಲ ವರ್ಗದ ಜನರಿಗೂ ಆದರ್ಶಪ್ರಾಯವಾದುದು ಎಂದರು.

ಅರಮನೆ ಶ್ರೀ ಜಪದಕಟ್ಟೆ ಮಠದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಸ್ಕೇರಿ ಅವ್ವನ ಜಾನಪದ ಕಾವ್ಯ ಪ್ರಶಸ್ತಿ ವಿಜೇತೆ ಅನಸೂಯ ದೇವನೂರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ವಿದ್ವಾನ್ ಶ್ರೀನಿವಾಸಮೂರ್ತಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಎಲ್.ಪಂಕಜಾಕ್ಷಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ರಾಧಿಕಾ ಹರಿಚರಣ್ ಪ್ರಾರ್ಥಿಸಿದರು. ವಿದ್ಯಾರ್ಥಿ ವಸಂತ ಕುಮಾರಿ, ಪಾಠಶಾಲೆಯ ಅಧ್ಯಾಪಕ ವಿದ್ವಾನ್ ಡಾ.ಗಣಪತಿ ಭಟ್ ನಿರೂಪಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular