ಕೆಂಗೇರಿ : ರಾಜಕೀಯ ಕಾರಣಕ್ಕಾಗಿ ಸೌಹಾರ್ದತೆಯಿಂದ ಬದುಕುತ್ತಿದ್ದ ಸಮುದಾಯಗಳ ನಡುವೆ ಒಳ ಮೀಸಲಾತಿ ಜಾರಿ ಮಾಡುವ ಮೂಲಕ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಸರ್ಕಾರದ ವಿರುದ್ಧ ಭೋವಿ ಗುರುಪೀಠದ ಪೀಠಾಧಿಪತಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ತೀವ್ರ ವಾಗ್ದಾಳಿ ನಡೆಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿ. ಬಿ.ಎ. ಅಂದ್ರಹಳ್ಳಿ ವಾರ್ಡ್ ನಲ್ಲಿ ಶ್ರೀ ಶ್ರೀ ಸಿದ್ದರಾಮೇಶ್ವರ ಭೋವಿ ಬಳಗದ ವತಿಯಿಂದ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವ ಹಾಗೂ ನೂತನ ಸಂಘಟನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಒಳ ಮೀಸಲಾತಿಯಿಂದ ಸಮುದಾಯಕ್ಕೆ ತೊಂದರೆ ಎದುರಾದರೆ ಬೃಹತ್ ಹೋರಾಟದ ಮೂಲಕ ನ್ಯಾಯಕ್ಕಾಗಿ ಅಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ಇದೇ ವೇಳೆ ಮೌಡ್ಯ, ಕಂದಾಚಾರಕ್ಕೆ ಒಳಗಾಗದೆ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ಕ್ರಮವನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಂತರ ವಿಧಾನಪರಿಷತ್ ಸದಸ್ಯ ಟಿ.ಎನ್. ಜವರಾಯಿ ಗೌಡ ಮಾತನಾಡಿ, ಶಿಕ್ಷಣದಿಂದ ವಂಚಿತರಾಗಿರುವ ಈ ಸಮುದಾಯಕ್ಕೆ ಶೈಕ್ಷಣಿಕ ಪ್ರಗತಿ ಸಾಧಿಸಲು ಎಲ್ಲ ರೀತಿಯ ಸಹಕಾರ ನೀಡಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು.
ಶ್ರಮದಾಯಿಕ ಕಾಯಕದಲ್ಲಿ ತೊಡಗಿಸಿ ಕೊಂಡಿರುವ ಈ ಸಮುದಾಯ ಆರ್ಥಿಕ, ಸಾಮಾಜಿಕ ಪ್ರಗತಿಯಲ್ಲಿ ಹಿಂದುಳಿದಿರುವುದು ಸಮಾಜದ ಪ್ರಗತಿಗೆ ತೊಡಕಾಗಿದೆ ಎಂದರಲ್ಲದೆ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಮುದಾಯಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ಸಹಕಾರ ನೀಡುವ ಮೂಲಕ ಮುಖ್ಯ ವಾಹಿನಿಗೆ ಕರೆತರಬೇಕೆಂದು ತಿಳಿಸಿದರು.
ಬಳಿಕ ಕಾಂಗ್ರೆಸ್ ಮುಖಂಡ ಪ್ರಕಾಶ್ ಮಾತನಾಡಿ, ತಳ ಸಮುದಾಯದ ಪ್ರಗತಿಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುವುದರಿಂದ ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಕ್ಷಣ ದೊರಕಿಸಿ ಕೊಡುವತ್ತ ಸಮುದಾಯಗಳು ಆದ್ಯತೆ ನೀಡಬೇಕೆಂದರು ಕರೆ ನೀಡಿದರು.
ಸಂಘದ ಅಧ್ಯಕ್ಷರಾದ ಎನ್.ಎ. ಭೀಮರಾಜು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಬೆಂಗಳೂರು ನಗರ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ವಿ.ವೆಂಕಟೇಶ್ ಎಸ್.ಎಪಿ., ಜೆಡಿಎಸ್ ಮುಖಂಡ ಗೋಪಾಲ್, ಸಂಘದ ಪದಾಧಿಕಾರಿಗಳಾದ ಸಾಬಣ್ಣ, ಭಿಮರಾಯ್, ದೀಪಕ್, ತಿರುಪತಿ, ಲಕ್ಷ್ಮಣ್ ವಡ್ಡಾರ್, ಹುಸೇನಪ್ಪ, ಮಲ್ಲಪ್ಪ, ಭರತ್, ಎನ್. ಸಾಬಣ್ಣ, ತಿಮ್ಮಯ್ಯ, ನರಸಿಂಹ,ಭೀಮಣ್ಣ, ಶರಣಪ್ಪ, ಹನುಮಂತ, ಮಾದೇಶ, ಬಡಾವಣೆಯ ನಾಗರಿಕರು ಮತ್ತಿತರರು ಉಪಸ್ಥಿತರಿದ್ದರು.



