Thursday, January 29, 2026
Google search engine

Homeಸಿನಿಮಾಕುಡಿದ ಮತ್ತಿನಲ್ಲಿ ನಟ ಮಯೂರ್‌ ಪಟೇಲ್‌ ಸರಣಿ ಅಪಘಾತ, FIR ದಾಖಲು

ಕುಡಿದ ಮತ್ತಿನಲ್ಲಿ ನಟ ಮಯೂರ್‌ ಪಟೇಲ್‌ ಸರಣಿ ಅಪಘಾತ, FIR ದಾಖಲು

ಬೆಂಗಳೂರು : ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ ಮಾಡಿದ ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನಲ್ಲಿ ಸ್ಯಾಂಡಲ್‌ವುಡ್‌ ನಟ ಮಯೂರ್ ಪಟೇಲ್ ಕುಡಿದ ಮತ್ತಿನಲ್ಲಿ ಅನಾಹುತ ಎಸಗಿದ್ದಾರೆ. ನಟ ಮಯೂರ್ ಪಟೇಲ್ ಕುಡಿದ ಮತ್ತಿನಲ್ಲಿ ರಾತ್ರಿ ತನ್ನ ಫಾರ್ಚೂನರ್ ಕಾರು ಚಲಾಯಿಸಿದ್ದು, ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾರೆ.

ಬೆಂಗಳೂರಿನ ದಮ್ಮಲೂರಿನ ಸಿಗ್ನಲ್ ಬಳಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಮೂರು ಕಾರುಗಳು ಜಖಂ ಆಗಿದೆ. ಈ ವೇಳೆ ಕಂಟ್ರೋಲ್ ರೂಮ್‌ಗೆ ಚಾಲಕರು ಕರೆ ಮಾಡಿದ್ದಾರೆ.

ಬಳಿಕ ಪೊಲೀಸರು ನಟ ಮಯೂರ್ ಪಟೇಲ್‌ರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಕಾರು ಮಾಲೀಕ ಶ್ರೀನಿವಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದರು. ಇದೀಗ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಸಂಚಾರ ಪೊಲೀಸರು ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು ‘ಡ್ರಿಂಕ್ ಆಂಡ್ ಡ್ರೈವ್’ ತಪಾಸಣೆ ನಡೆಸಿದಾಗ ನಟ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಅಚ್ಚರಿಯ ವಿಷಯವೆಂದರೆ, ಅಪಘಾತ ಎಸಗಿದ ನಟನ ಕಾರಿನ ಇನ್ಸೂರೆನ್ಸ್ ಕೂಡ ಲ್ಯಾಪ್ಸ್ ಆಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪಾರ್ಚೂನರ್ ಕಾರನ್ನು ಸೀಜ್ ಮಾಡಿದ್ದು, ಹಲಸೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಅಪಘಾತದಿಂದಾಗಿ ಕಾರ್ ಮಾಲೀಕ ಕಂ ಚಾಲಕ ಶ್ರೀನಿವಾಸ್ ಎಂಬುವವರ ಬದುಕು ಬೀದಿಗೆ ಬಂದಿದೆ. ಪೊಲೀಸ್ ಸ್ಟೇಷನ್ ಮುಂದೆಯೇ ಕಣ್ಣೀರಿಟ್ಟ ಶ್ರೀನಿವಾಸ್, ನನ್ನ ಹೆಂಡತಿಯ ಒಡವೆ ಅಡವಿಟ್ಟು ಕೇವಲ ಒಂದು ವಾರದ ಹಿಂದಷ್ಟೇ ಈ ಹೊಸ ಕಾರು ಖರೀದಿಸಿದ್ದೆ. ಕಂಪನಿಯೊಂದಕ್ಕೆ ಬಾಡಿಗೆಗೆ ಓಡಿಸುತ್ತಾ ಜೀವನ ಸಾಗಿಸುತ್ತಿದ್ದೆ. ಫೆಬ್ರವರಿ 5ಕ್ಕೆ ಮೊದಲ ಇಎಂಐ ಕಟ್ಟಬೇಕಿದೆ. ಈಗ ಕಾರು ಜಖಂಗೊಂಡು ನಿಂತು ಹೋದರೆ ನಾನು ಸಾಲ ತೀರಿಸುವುದು ಹೇಗೆ? ಎಂದು ಅಳಲು ತೋಡಿಕೊಂಡಿದ್ದಾರೆ.

ಅಪಘಾತವಾದ ತಕ್ಷಣ ಕಾರಿನಿಂದ ಇಳಿದು ಬಂದ ಮಯೂರ್ ಪಟೇಲ್, ನಾನು ಸಿನಿಮಾ ನಟ ಮಯೂರ್ ಪಟೇಲ್, ಬೆಳಿಗ್ಗೆ ಎಲ್ಲ ಸರಿ ಮಾಡಿಕೊಡ್ತೀನಿ ಎಂದು ಹೇಳಿ ಜಾರಿಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular