ಬೆಂಗಳೂರು : ರಾಜ್ಯದಲ್ಲಿನ ಸರ್ಕಾರಿ ನೌಕರರಿಗೂ ಡ್ರೆಸ್ ಕೋಡ್ ತರೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಕರ್ನಾಟಕದ ಸರ್ಕಾರಿ ನೌಕರರು ಪ್ರತಿ ತಿಂಗಳ ಮೊದಲ ಶುಕ್ರವಾರ ಹಾಗೂ ನಿರ್ದೇಶಿತ ವಿಶೇಷ ಸಂದರ್ಭಗಳಲ್ಲಿ ಖಾದಿ ಬಟ್ಟೆ ಧರಿಸುವುದು ಕಡ್ಡಾಯಗೊಳಿಸಲಾಗುತ್ತಿದೆ ಎಂಬುದಾಗಿ ಹೊಸ ಸರ್ಕ್ಯುಲರ್ ಸೂಚನೆ ತಿಳಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಹಿರಿಯ ಆಪ್ತ ಕಾರ್ಯದರ್ಶಿ ಸರ್ಕಾರಿ ನೌಕರರ ಸಂಘಟನೆಯೊಂದಿಗೆ ಇಂದು ಮಹತ್ವದ ಸಭೆಯನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದ್ದು, ಈ ಕುರಿತ ಸುತ್ತೋಲೆಯೊಂದು ಹೊರಬಿದ್ದಿದೆ.
ಸುತ್ತೋಲೆಯ ಪ್ರಕಾರ, ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರು ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಖಾದಿ ಉಡುಪನ್ನು ಧರಿಸುವುದು ಮತ್ತು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸೇರಿದಂತೆ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಧಿಕಾರಿಗಳು/ಸಿಬ್ಬಂದಿಗಳೆಲ್ಲರೂ ಖಾದಿ ಉಡುಪನ್ನು ಧರಿಸುವ ಕುರಿತಂತೆ ಚರ್ಚಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಇಂದು (ದಿನಾಂಕ: 29.01.2026) ಮಧ್ಯಾಹ್ನ 12.00 ಘಂಟೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 320ರಲ್ಲಿ ಸಭೆಯನ್ನು ನಿಗದಿಪಡಿಸಲಾಗಿದೆ. ಈ ಸಭೆಗೆ ತಾವು ಹಾಜರಾಗಬೇಕೆಂದು ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದಿದ್ದಾರೆ.



