ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸರ್ಕಾರಿ ಶಾಲೆಯಲ್ಲಿ ಓದಿದ ಸಾಧಕ ವಿದ್ಯಾರ್ಥಿಗಳನ್ನ ಗುರುತಿಸಿ ಅವರನ್ನ ಗ್ರಾಮಸ್ಥರು ಮತ್ತು ಶಾಲೆಯ ವತಿಯಿಂದ ಸನ್ಮಾನಿಸುವ ಕೆಲಸದಿಂದ ಇತರೆ ವಿದ್ಯಾರ್ಥಿಗಳ ಓದಿಗೆ ಉತ್ತೇಜಿಸಬಹುದು ಮತ್ತು ಸ್ಪೂರ್ತಿಯಾಗಿಸಬಹುದು ಎಂದು ಕೆ.ಆರ್.ನಗರ ಎಪಿಎಂಸಿ ಮಾಜಿ ನಿರ್ದೇಶಕ ಮತ್ತು ಕೋಳೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಂಡಹಳ್ಳಿ ಕುಚೇಲ್ ಹೇಳಿದರು
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆ ಆರ್ ನಗರ -ಸಾಲಿಗ್ರಾಮ ಅವಳಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಬಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರವರಿಗೆ ಬೆಂಗಳೂರಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ 50 ಸಾವಿರ ರೂಗಳ ಬಹುಮಾನ ಪಡೆದ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೌಲಭ್ಯಗಳು ಕಡಿಮೆ ಇದ್ದರು ಸಾಧಿಸುವ ಛಲ ಸಾಕಷ್ಟು ಇರುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಹೆಚ್ಚು ಅಂಕಗಳಿಸಿ ಸಾಧನೆಗೈಯುತ್ತಿದ್ದು ಇದ್ದಕ್ಕೆ ಸರ್ಕಾರಿ ಶಾಲೆಗಳ ಶಿಕ್ಷಕರು ನೀಡುವ ಶಿಕ್ಷಣ ಮತ್ತು ಪೋಷಕರ ಬೆಂಬಲವೇ ಕಾರಣ ಎಂದು ಅವರು ಇದೇ ಶಾಲೆಯ ಬಿಸಿಯೂಟ ತಯಾರು ಮಾಡುವ ಸಿಬ್ಬಂದಿ ಪವಿತ್ರ ರುದ್ರಮೂರ್ತಿ ಅವರ ಪುತ್ರಿ ವಿದ್ಯಾ ಕಡುಬಡತನದ ನಡುವೆ ಅವಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದು ಸಾಧಕರಿಗೆ ಸ್ಪೂರ್ತಿ ಆಗಿದ್ದಾಳೆ ಎಂದು ಹೇಳಿದರು.
ಗ್ರಾಮಾಂತರ ಪ್ರದೇಶದಲ್ಲಿನ ಶಿಕ್ಷಣ ಗುಣಮಟ್ಟವನ್ನು ಅಳೆದು ತೂಕ ಮಾಡುವರಿಗೆ ವಿದ್ಯಾ ತೆಗೆದಿರುವ ಅಂಕಗಳನ್ನು ನೋಡಿದಾಗ ಸರ್ಕಾರಿ ಶಾಲೆಯ ಶಿಕ್ಷಣದ ಗುಣ ಮಟ್ಟವನ್ನು ಪೋಷಕ ವರ್ಗದವರು ಅರ್ಥ ಮಾಡಿ ಕೊಳ್ಳಬೇಕೆಂದ ಕುಚೇಲ್ ಹುಟ್ಟೂರಿಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿರುವ ವಿದ್ಯಾ ಶೈಕ್ಷಣಿಕ ಜೀವನ ಉಜ್ವಲಗೊಳ್ಳಲಿ ಜೊತೆಗೆ ಭವಿಷ್ಯದಲ್ಲಿ ಉತ್ತಮ ಸರ್ಕಾರಿ ಅಧಿಕಾರಿಯಾಗಲಿ ಎಂದು ಶುಭ ಹಾರೈಸಿದ ಅವರು ಉಳ್ಳವರು ಈ ವಿದ್ಯಾರ್ಥಿಗೆ ಆರ್ಥಿಕ ಸಹಾಯ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಅಶ್ವತ್, ಮುಖ್ಯ ಶಿಕ್ಷಕರಾದ ರಘು ಎಂ ಆರ್.ಸಹ ಶಿಕ್ಷಕರಾದ ಬಿ.ಕೆ ಚಿದಾನಂದ, ಎಸ್.ಎನ್.ಮಂಜು, ಶೃತಿ, ಭವ್ಯ, ನಿಶಾಂತ್ , ಸಿಬ್ಬಂದಿಗಳಾದ ಪ್ರಮೋದ್, ಗುರುರಾಜ್ ಸೇರಿದಂತೆ ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.



