ಮನೆಯಲ್ಲಿದ್ದ ದೈವಗಳ ಮೂರ್ತಿಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಮಂಗಳೂರಿನ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಅಮಿತಾ ಎಂಬುವವರ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಇತ್ತು. ಈ ಮನೆಯಲ್ಲಿ ಯಾರೂ ವಾಸವಿರದ ಕಾರಣ ಕೇವಲ ಪೂಜೆ ಮಾಡಿ ದೀಪ ಹಚ್ಚಿ ನಂತರ ಬೀಗ ಹಾಕಲಾಗುತ್ತಿತ್ತು. ದಿನಾಂಕ: 26-12-2025 ರಂದು ರಾತ್ರಿ ಸಮಯ ಯಾರೋ ಅಪರಿಚಿತರು ಮನೆಯ ಮೇಲ್ಚಾವಣಿಯ ಹಂಚು ತೆಗೆದು ಮನೆಯೊಳಗೆ ಪ್ರವೇಶಿಸಿ ಸುಮಾರು 1,00,000 ಮೌಲ್ಯದ 1 ಪಸಪ್ಪ ದೈವದ ತಾಮ್ರದ ಮೂರ್ತಿ, 1 ಮಂತ್ರದೇವತೆಯ ಬೆಳ್ಳಿಯ ಮೂರ್ತಿ, 1 ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರದ ಮೂರ್ತಿ, 1 ಬೆಳ್ಳಿಯ ಕಡ್ಸಲೆ (ಖಡ್ಗ), 2ತಾಮ್ರದ ಘಂಟೆ, 4 ತಾಮ್ರದ ಚೆಂಬು ಹಾಗೂ 1 ಎಲ್.ಇ.ಡಿ ಟಿ.ವಿ ಕಳವು ಮಾಡಿದ ಬಗ್ಗೆ ಠಾಣಾ ಅ.ಕ್ರ 170/2025 ಕಲಂ: 331 (4), 305 (ಎ) ಬಿ.ಎನ್.ಎಸ್ ರಂತೆ ದಿನಾಂಕ: 27.12.2025 ರಂದು ಪ್ರಕರಣವನ್ನು ದಾಖಲಿಸಿಕೊಂಡು ಸುರತ್ಕಲ್ ಪೊಲೀಸರು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು, ತಾಂತ್ರಿಕ ವಿಧಾನಗಳನ್ನು ಪರಿಶೀಲನೆ ನಡೆಸಿದಾಗ ವಾಜೀದ್ ಜೆ @ ವಾಜಿ ಎಂಬಾತನ್ನು ದಸ್ತಗಿರಿ ಮಾಡಿ ವಿಚಾರಿಸಲಾಯ್ತು. ಈತನ ಹೇಳಿಕೆಯಂತೆ ಕೃತ್ಯ ಎಸಗಿದ್ದಾಗಿ ಹಾಗೂ ಮನೆಕಳ್ಳತನ ಮಾಡಿದ ಮಾಲಿನಲ್ಲಿ ಹಿತ್ತಾಳೆ ಹಾಗೂ ತಾಮ್ರದ ಸಾಮಾಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದಂತೆ ಸಯ್ಯದ್ ಆಲಿ ಎಂಬಾತನನ್ನು ದಸ್ತಗಿರಿ ಮಾಡಿ ಆರೋಪಿತರುಗಳಿಂದ ಮನೆಯಿಂದ ಕಳ್ಳತನವಾದ ಸುಮಾರು 1,95,000 ಮೌಲ್ಯದ ಬೆಳ್ಳಿಯ ಮಂತ್ರದೇವತೆಯ ಮೂರ್ತಿ, ಕೊಡೆ, ಕಡ್ಸಲೆ, ಸುಮಾರು ರೂ 2,750 ಮೌಲ್ಯದ ಹಿತ್ತಾಳೆ ಪೂಜಾ ಸಾಮಾಗ್ರಿ, ಸುಮಾರು 300 ಮೌಲ್ಯದ ತಾಮ್ರದ ಪೂಜಾ ಸಾಮಾಗ್ರಿ, ಸುಮಾರು 2,000 ಮೌಲ್ಯದ ಟಿ.ವಿ & ಸೆಟ್ ಆಪ್ ಬಾಕ್ಸ್, ಆರೋಪಿತರ 2 ಮೊಬೈಲ್ ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಸುಮಾರು 30,000 ಮೌಲ್ಯದ ಒಂದು ಸ್ಕೂಟರನ್ನು ಮಹಜರು ಮುಖೇನ ಸ್ವಾಧೀನ ಪಡೆಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಮನೆ ಕಳ್ಳತನ ಮಾಡಿದ ಆರೋಪಿ ವಾಜೀದ್ ಜೆ @ ವಾಜಿ ಈತನ ಮೇಲೆ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಹಾಳೆ ಹಾಗೂ ಎಂಓಬಿ ತೆರೆಯಲಾಗಿದ್ದು ಈತನ ಮೇಲೆ ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಾದ್ಯಂತ 1 ಕೊಲೆಯತ್ನ, 2 ದರೋಡೆ, 3 ದನ ಕಳ್ಳತನ, 6 ಮನೆಕಳ್ಳತನ, 3 ವಾಹನ ಕಳ್ಳತನ, 1 ಇತರ ಪ್ರಕರಣಗಳು ದಾಖಲಾಗಿದ್ದು ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿದೆ. ಆರೋಪಿತರನ್ನು ದಿನಾಂಕ: 28.01.2026 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
- ಮಂಗಳೂರಿನಿಂದ ಶಂಶೀರ್ ಬುಡೋಳಿ



