ಬೆಂಗಳೂರು : ಡಾಲರ್ ಮೌಲ್ಯ ಕುಸಿತವಾಗಿದೆ, ತಲಾದಾಯದಲ್ಲಿ 136 ರಿಂದ 146ನೇ ಸ್ಥಾನಕ್ಕೆ ಹೋಗಿದ್ದೇವೆ. ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯ ಆಗಿದೆ. ಪ್ರಹ್ಲಾದ್ ಜೋಶಿ ಹಾಗೂ ಸೋಮಣ್ಣ ರಾಜ್ಯದ ಜನರಿಗೆ ಹೇಗೆ ಮುಖ ತೋರಿಸುತ್ತಾರೆ? ಎಂದು ಸಚಿವ ಎಂ.ಬಿ ಪಾಟೀಲ್ ಪ್ರಶ್ನೆ ಮಾಡಿದ್ರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು- ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹವಾದರೂ ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ. ಇದರ ಬದಲು ಬೆಂಗಳೂರು-ಪುಣೆ ನಡುವೆ ಇಂಥ ಕಾರಿಡಾರ್ ಬರಬೇಕು. ಇದಕ್ಕಾಗಿ ರಾಜ್ಯದ ಮತ್ತು ಮಹಾರಾಷ್ಟ್ರದ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದ್ರು.
ಈಗ ಘೋಷಿಸಿರುವ ಎರಡೂ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದೊಳಗೆ ನೂರು ಕಿಲೋಮೀಟರ್ ಕೂಡ ಓಡುವುದಿಲ್ಲ. ಇದನ್ನು ಮೋದಿ ಸರ್ಕಾರ ಪರಿಗಣಿಸದೇ ಇರುವುದು ದುರ್ದೈವದ ಸಂಗತಿ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಷಿಸಿರುವ 5,600 ಕೋಟಿ ರೂಪಾಯಿ ನೆರವನ್ನು ಬಿಡುಗಡೆ ಮಾಡಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು. ಬಜೆಟ್ಟಿನಲ್ಲಿ ಇವುಗಳ ಪ್ರಸ್ತಾಪವೇ ಇಲ್ಲ. ಮಿಕ್ಕಂತೆ ರೈತ ಸಮುದಾಯಕ್ಕೆ ನೆರವಾಗುವಂತಹ ಒಂದು ಯೋಜನೆಯೂ ಇದರಲ್ಲಿ ಇಲ್ಲ ಎಂದು ಅವರು ಬೊಟ್ಟು ಮಾಡಿದರು.
ಈ ಬಜೆಟ್ ರಾಜ್ಯದ ಪಾಲಿಗೆ ಎಂದಿನಂತೆಯೇ ನಿರಾಶಾದಾಯಕವಾಗಿದೆ. ಆದರೆ, ಅದು ಪ್ರಕಟಿಸಿರುವ ವಿಶ್ವವಿದ್ಯಾಲಯ ಟೌನ್ ಶಿಪ್ ಗಳ ನಿರ್ಮಾಣ ಮತ್ತು 5 ಪ್ರಾದೇಶಿಕ ವೈದ್ಯಕೀಯ ಪ್ರವಾಸೋದ್ಯಮ ಹಬ್ ಅಭಿವೃದ್ಧಿ ಯೋಜನೆಗಳು ನಮ್ಮ ಕ್ವೀನ್ ಸಿಟಿ ಪರಿಕಲ್ಪನೆಯಿಂದ ಪ್ರಭಾವಿತವಾಗಿವೆ ಎಂದು ಅವರು ವಿಶ್ಲೇಷಿಸಿದರು.
ನಾವು ರಾಜ್ಯಕ್ಕೆ ಎರಡು ರಕ್ಷಣಾ ಕಾರಿಡಾರ್ ಯೋಜನೆಗಳನ್ನ ಮಂಜೂರು ಮಾಡಬೇಕು ಎಂದು ಕೋರಿದ್ದೆವು. ರಾಜ್ಯದಲ್ಲಿರುವ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ಕಾರ್ಯಪರಿಸರ ಅತ್ಯುತ್ತಮವಾಗಿರುವ ಹಿನ್ನೆಲೆಯಲ್ಲಿ ಇದನ್ನ ಬಜೆಟ್ಟಿನಲ್ಲಿ ಪರಿಗಣಿಸಬೇಕಾಗಿತ್ತು. ಆದರೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಚಕಾರವನ್ನೂ ಎತ್ತಿಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು.
ಕ್ವೀನ್ ಸಿಟಿ ಯೋಜನೆ ಒಟ್ಟು 5 ಸಾವಿರ ಎಕರೆಯಲ್ಲಿ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ 2 ಸಾವಿರ ಎಕರೆಯಲ್ಲಿ ಇದು ಅನುಷ್ಠಾನಗೊಳ್ಳುತ್ತಿದ್ದು, ಕೆಲಸಗಳು ಪ್ರಗತಿಯಲ್ಲಿವೆ. ಇಲ್ಲಿ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕ್ಯಾಂಪಸ್, ಗುಣಮಟ್ಟದ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಎಲ್ಲವೂ ಬರಲಿವೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವು ಒಡಂಬಡಿಕೆಗಳು ಆಗಿವೆ. ಇನ್ನು ಎರಡು ವರ್ಷಗಳಲ್ಲಿ ಇವೆಲ್ಲವೂ ಸಂಪೂರ್ಣ ಜಾರಿಗೆ ಬರಲಿವೆ. ಕೇಂದ್ರ ಸರ್ಕಾರವು ಬಜೆಟ್ಟಿನಲ್ಲಿ ಈಗ ಇಂತಹದ್ದೇ ಯೋಜನೆಗಳನ್ನ ಘೋಷಿಸುವ ಮೂಲಕ ನಮ್ಮನ್ನ ಅನುಸರಿಸಿದೆ ಎಂದು ಅವರು ಪ್ರತಿಪಾದಿಸಿದರು.
ಬಯೋಫಾರ್ಮಾ ಹಬ್ ಯೋಜನೆ ಕೂಡ ನಮ್ಮ ಉಪಕ್ರಮಗಳ ಪ್ರತಿಫಲನವೇ ಆಗಿದೆ. ಇದಕ್ಕಾಗಿ ನಾವು ರಾಜ್ಯದಲ್ಲಿ ಪ್ರತ್ಯೇಕ ವಿಷನ್ ಗ್ರೂಪನ್ನೇ ರಚಿಸಿದ್ದೇವೆ. ಕೇಂದ್ರ ಸರಕಾರದ ಬಜೆಟ್‌ನಲ್ಲಿ ಕರ್ನಾಟಕದ ಅಭಿವೃದ್ಧಿ ಚಿಂತನೆಯ ಮಾದರಿಗಳನ್ನ ಅನುಕರಿಸುತ್ತಿರುವುದು ಸ್ಪಷ್ಟವಾಗಿದೆ. ತೆರಿಗೆ ಪಾಲು, ಕೈಗಾರಿಕಾ ಬೆಳವಣಿಗೆ ಇತ್ಯಾದಿಗಳಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿರುವ ರಾಜ್ಯಕ್ಕೆ ಕೇಂದ್ರ ಸರಕಾರವು ಹೆಚ್ಚು ಲಾಭದಾಯಕ ಯೋಜನೆಗಳನ್ನು ಕೊಡಬೇಕು ಎಂದು ಅಪೇಕ್ಷಿಸುವುದು ನಮ್ಮ ನ್ಯಾಯಬದ್ಧ ಹಕ್ಕಾಗಿದೆ ಎಂದು ಪಾಟೀಲ ಹೇಳಿದ್ದಾರೆ.



