ಮೈಸೂರು : ಯುವ ಸಮುದಾಯದ ಸಬಲೀಕರಣ, ತಾಂತ್ರಿಕ ಪ್ರಗತಿ ಮತ್ತು ವಿಕಸಿತ ಭಾರತ ಆಶಯಕ್ಕೆ ಪೂರಕವಾದ ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಒಳಗೊಂಡಿದೆ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
2026–27ನೇ ಸಾಲಿನ ಕೇಂದ್ರ ಆಯವ್ಯಯ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇದು ಅಭಿವೃದ್ಧಿ ಮತ್ತು ಜನಪರ ಬಜೆಟ್ ಆಗಿದ್ದು, ದೇಶದ ಭವಿಷ್ಯ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕುತ್ತದೆ ಎಂದರು. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನೇತೃತ್ವದಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾಗಲಿರುವ COSMOS ತಾರಾಲಯ ಹಾಗೂ ಖಗೋಳಶಾಸ್ತ್ರ ತರಬೇತಿ ಕೇಂದ್ರವು ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಗೆ ಪ್ರಮುಖ ಕೇಂದ್ರವಾಗಲಿದೆ ಎಂದು ಹೇಳಿದರು. ಇದು ಮುಂದಿನ ಪೀಳಿಗೆಯ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡುವುದರ ಜೊತೆಗೆ ವಿಕಸಿತ ಭಾರತ 2047 ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದರು.
ಹಣಕಾಸಿನ ಶಿಸ್ತು, ಆರ್ಥಿಕ ಸಮತೋಲನ ಹಾಗೂ ಮೂಲಸೌಕರ್ಯದಲ್ಲಿ ದಾಖಲೆ ಮಟ್ಟದ ಸಾರ್ವಜನಿಕ ಹೂಡಿಕೆ ಈ ಬಜೆಟ್ನ ವಿಶೇಷತೆ ಎಂದು ಅವರು ಹೇಳಿದರು. ಅರೆವಾಹಕ, ಬಯೋಫಾರ್ಮಾ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು 2ನೇ ಮತ್ತು 3ನೇ ಸ್ತರದ ನಗರಗಳಿಗೂ ಯೋಜನೆಗಳನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣದಿಂದ ಉದ್ಯೋಗಕ್ಕೆ ಮಾರ್ಗಗಳು, AVGC, ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ ಕೌಶಲ್ಯಾಭಿವೃದ್ಧಿ ಮತ್ತು ಪ್ರಾದೇಶಿಕ ಬೆಳವಣಿಗೆ ಕೇಂದ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ ಎಂದು ಯದುವೀರ್ ಒಡೆಯರ್ ವಿವರಿಸಿದರು. ಎಂಎಸ್ಎಂಇಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಸಾಲ, ತಂತ್ರಜ್ಞಾನ ಅಳವಡಿಕೆ ಮತ್ತು ಮಾರುಕಟ್ಟೆ ಸಂಪರ್ಕಗಳಿಗೆ ನೀಡಿರುವ ಬೆಂಬಲ ಶ್ಲಾಘನೀಯ ಎಂದು ಹೇಳಿದರು.
ಲಾಜಿಸ್ಟಿಕ್ಸ್ ಬಲಪಡಿಸಲು ಸರಕು ಸಾಗಣೆ ಕಾರಿಡಾರ್ಗಳು, ಒಳನಾಡಿನ ಜಲಮಾರ್ಗಗಳು ಹಾಗೂ ಹೈ-ಸ್ಪೀಡ್ ರೈಲು ಸಂಪರ್ಕದ ಮೇಲೆ ಗಮನ ಹರಿಸಲಾಗಿದೆ. 2030ರ ವೇಳೆಗೆ 2 ಮಿಲಿಯನ್ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿರುವ ಈ ಬಜೆಟ್, ಯುವ ಸಮುದಾಯ ಮತ್ತು ಆರ್ಥಿಕ ಅಭಿವೃದ್ಧಿಗೆ ದೂರದೃಷ್ಟಿಯ ಹೆಜ್ಜೆಯಾಗಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.



