ಹಾಸನ : ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜು ನಡುವಿನ ನಿವೇಶನ ಮಾಲೀಕತ್ವದ ಜಟಾಪಟಿಗೆ ಪೊಲೀಸರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಆದರೆ ಈ ವಿವಾದಕ್ಕೆ ಅಧಿಕಾರಿಗಳ ಯಡವಟ್ಟು ಕಾರಣ ಎಂಬುದು ಇಬ್ಬರ ಬಳಿಯಿರುವ ದಾಖಲೆಗಳಿಂದ ಬಹಿರಂಗವಾಗಿದೆ.
ಒಂದೇ ಸೈಟ್‍ಗೆ ಅಧಿಕಾರಿಗಳು ಎರಡೆರಡು ದಾಖಲೆ ನೀಡಿ ಗೋಲ್ಮಾಲ್ ಎಸಗಿದ್ದು ಇಷ್ಟೆಲ್ಲಾ ಗಲಾಟೆಗೆ ಕಾರಣವಾಗಿದೆ. ಪುಷ್ಪಾ ಅವರ ಬಳಿಯಿರುವ ದಾಖಲೆಗಳು ನಿವೇಶನ ಅವರಿಗೆ ಸೇರಿದೆ ಎಂಬುದನ್ನು ತೋರಿಸುತ್ತಿದ್ದರೆ, ದೇವರಾಜು ಅವರ ಬಳಿಯಿರುವ ದಾಖಲೆಗಳು ಲಕ್ಷ್ಮಮ್ಮ ಅವರೇ ಜಾಗದ ಮಾಲೀಕರು ಎಂಬುದನ್ನು ಸಾಬೀತುಪಡಿಸುತ್ತಿದೆ. ಹೀಗಾಗಿ ಕೋರ್ಟ್‍ನಲ್ಲೇ ಇದರ ಅಂತಿಮ ತೀರ್ಪು ಹೊರಬೀಳಬೇಕಿದೆ.
ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಿದ್ಯಾನಗರದಲ್ಲಿರುವ 40*60 ಅಳತೆಯ ನಿವೇಶನವನ್ನು 29-1-2020 ರಲ್ಲಿ ಪುಷ್ಪಾ ಅವರು ಅಮೆರಿಕದಲ್ಲಿ ವಾಸವಾಗಿರುವ ಗಿರೀಶ್ ಕೋಂ ಮಹಲಿಂಗಪ್ಪ ಅವರಿಂದ ಖರೀದಿ ಮಾಡಿ ಕಾಂಪೌಂಡ್ ಹಾಕಿದ್ದರು. ಈ ಹಿಂದೆ ಅಂದರೆ 1982 ರಲ್ಲಿ ಚಿಕ್ಕೆಗೌಡ ಸನ್ ಆಫ್ ತಿಮ್ಮೇಗೌಡರಿಂದ ಸೈಟ್‍ನ್ನು ಕೆ.ಪಿ.ಶ್ರೀಮತಿ / ಪಿ.ಮಲ್ಲೇಶ್ ಖರೀದಿಸಿದ್ದು ಅವರಿಂದ ಕೆ.ಪಿ.ಶ್ರೀಮತಿ 2007 ರಲ್ಲಿ ಗಿರೀಶ್ ಕೋಂ ಮಹಲಿಂಗಪ್ಪ ಖರೀದಿ ಮಾಡಿದ್ದರು. 1982 ರಿಂದ ಇಬ್ಬರ ಹೆಸರಿನ ಮೂಲಕ ಮೂರನೇ ಮಾಲೀಕರಾಗಿ ಪುಷ್ಪಾ ಸೈಟ್ ಖರೀದಿಸಿದ್ದರು.
2020 ರಲ್ಲಿ ಲಕ್ಷ್ಮಮ್ಮ ಅವರಿಂದ ಜಿಪಿಎ ಪಡೆದುಕೊಂಡಿರುವ ದೇವರಾಜು ಅವರು ಈ ಸೈಟ್ ತಮಗೆ ಸೇರಿದ್ದು ಎಂದು ವಾದ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 2023 ರಲ್ಲಿ ಪುಷ್ಪಾ ಹಾಗೂ ನಟರಾಜ್ ವಿರುದ್ಧ ಹಾಸನದ ನಾಲ್ಕನೇ ಜೆಎಂಎಫ್‍ಸಿ ಕೋರ್ಟ್‍ನಲ್ಲಿ ದೇವರಾಜು ದಾವೆ ಹೂಡಿದ್ದರು. ದಾವೆ ನಡೆಯುವ ಮುಂಚೆಯೇ ಮೂರು ವರ್ಷದಿಂದಲೂ ಯಶ್ ತಾಯಿ ಪುಷ್ಪಾ ನಿವೇಶನದ ಸ್ವಾಧೀನ ಹೊಂದಿದ್ದಾರೆ.
ಪುಷ್ಪಾ ಹಾಗೂ ದೇವರಾಜು ಇಬ್ಬರ ಬಳಿಯೂ ನಿವೇಶನ ತಮಗೆ ಸೇರಿದ್ದು ಎಂಬ ಬಗ್ಗೆ ದಾಖಲೆಗಳಿದ್ದು, ಇದರಲ್ಲಿ ಸ್ಪಷ್ಟವಾಗಿ ಒಂದೇ ಸ್ವತ್ತಿಗೆ ಎರಡೆರಡು ಚಕ್ ಬಂದಿ ಇರುವುದು ಬಹಿರಂಗವಾಗಿದೆ. ಸೈಟ್ ತನ್ನದು ಎನ್ನುತ್ತಿರುವ ದೇವರಾಜು ಪ್ರಕಾರ ಈ ನಿವೇಶನದ ಪೂರ್ವಕ್ಕೆ-ಕಾಳೇಗೌಡರ ಹೊಲ ಪಶ್ಚಿಮಕ್ಕೆ-ಮಂಜೇಲು ಹೊಲ ಉತ್ತರಕ್ಕೆ-ತಮ್ಮದೇ ಜಮೀನು ದಕ್ಷಿಣಕ್ಕೆ- ಇದೇ ಸ್ವತ್ತಿನ ಉಳಿಕೆ ಭೂಮಿ ಎಂದು ನಮೂದಾಗಿದೆ. ಇದೇ ಚಕ್ ಬಂದಿ ಆಧರಿಸಿ ದೇವರಾಜು ಕೋರ್ಟ್‍ನಲ್ಲಿ ಕೇಸ್ ದಾಖಲಿಸಿದ್ದಾರೆ. ಇದೇ ಸೈಟ್‍ನ್ನು ಪುಷ್ಪಾ ಅವರು ಖರೀದಿ ಮಾಡುವಾಗ ಇದ್ದ ಚಕ್ ಬಂದಿ ಸಂಪೂರ್ಣ ವಿಭಿನ್ನವಾಗಿದೆ.
ಪುಷ್ಪಾ ಅವರ ಬಳಿಯಿರುವ ದಾಖಲೆ ಪ್ರಕಾರ ಪೂರ್ವಕ್ಕೆ-ರುದ್ರೇಗೌಡರ ಸ್ವತ್ತು, ಪಶ್ಚಿಮಕ್ಕೆ- ಖರೀದಿದಾರರ ಸ್ವತ್ತು (ಈ ಸೈಟ್ ಖರೀದಿ ಮಾಡುವಾಗ ಪಶ್ಚಿಮಕ್ಕೆ ಇರುವ ಮನೆಯನ್ನ ಸ್ವತ ಪುಷ್ಪಾ ಖರೀದಿ ಮಾಡಿದ್ದಾರೆ) ಉತ್ತರಕ್ಕೆ- ಬೇರೆಯವರ ನಿವೇಶನ, ದಕ್ಷಿಣಕ್ಕೆ- ರಸ್ತೆ ಇರುವುದು ಚೆಕ್ ಬಂದಿಯಲ್ಲಿ ನಮೂದಾಗಿದೆ. ಆದರೆ ದೇವರಾಜು ಅವರ ಚಕ್ ಬಂದಿಯಲ್ಲಿ ದಕ್ಷಿಣಕ್ಕೆ ರಸ್ತೆಯೇ ಇಲ್ಲಾ. ಹಾಗಾಗಿ ಒಂದೇ ನಿವೇಶನಕ್ಕೆ ಎರಡೆರಡು ರೀತಿಯ ಸರ್ವೆ ನಂಬರ್, ಖಾತೆ ನಂಬರ್ ಹಾಗೂ ಪ್ರತ್ಯೇಕ ಇ-ಸ್ವತ್ತು ಮಾಡಿ ಗೋಲ್ಮಾಲ್ ಮಾಡಿರುವುದರಿಂದ ಎರಡು ಕಡೆಯವರು ಸ್ವತ್ತು ನಮ್ಮದೆಂದು ಹಕ್ಕು ಮಂಡಿಸುತ್ತಿದ್ದು, ಯಶ್ ತಾಯಿ ಪುಷ್ಪಾ ಮೋಸ ಹೋಗಿದ್ದಾರೆ ಎಂದು ದೇವರಾಜು ಹೇಳುತ್ತಿದ್ದಾರೆ.
1982 ರಿಂದ ಸುಮಾರು 44 ವರ್ಷ ಕಾಣದಾಗಿದ್ದ ಲಕ್ಷ್ಮಮ್ಮ ದಿಢೀರ್ ಹೇಗೆ ಬಂದರು. ಈ ಸೈಟ್ ಅನ್ನು 1982 ರಲ್ಲಿ ಕೆ.ಪಿ.ಶ್ರೀಮತಿ ಎಂಬುವವರು ಖರೀದಿ ಮಾಡಿದ್ದಾರೆ. ಶ್ರೀಮತಿ ಅವರು ಸುಮಾರು 23 ವರ್ಷಗಳ ಕಾಲ ಸೈಟ್ ಮಾಲೀಕರಾಗಿದ್ದರು. ಆಗ ಯಾರೂ ತಕರಾರು ಮಾಡಿರಲಿಲ್ಲ. ಆದಾದ ಬಳಿಕ 2007 ರಲ್ಲಿ ಗಿರೀಶ್ ಕೋಂ ಮಹಲಿಂಗಪ್ಪ ಅವರು ಇದೇ ಖರೀದಿ ಮಾಡಿದ್ದು, ಗಿರೀಶ್ 13 ವರ್ಷಗಳ ಅಂದರೆ 2020 ರವರೆಗೆ ಈ ಸೈಟ್‍ನ ಒಡೆತನ ಹೊಂದಿದ್ದರು. 2020 ರಲ್ಲಿ ನಾನು ಖರೀದಿ ಮಾಡಿದ್ದು ಸೈಟ್ ನನ್ನ ಸ್ವಾಧೀನದಲ್ಲಿದೆ. ಬರೋಬ್ಬರಿ 44 ವರ್ಷಗಳ ಇಲ್ಲದ ವ್ಯಾಜ್ಯ ಈಗ ಏಕೆ ಬಂತು ಎಂದು ಪುಷ್ಪಾ ಪ್ರಶ್ನಿಸಿದ್ದಾರೆ. ಯಶ್ ಅವರ ಹೆಸರು ಹಾಳು ಮಾಡಲು ಷಡ್ಯಂತ್ರ ನಡೆಸಿದ್ದಾರೆ. ದೇವರಾಜು ಅವರ ಸೈಟ್ ಇದಾಗಿದ್ದರೆ ಅಧಿಕಾರಿಗಳ ಮೋಸ ಮಾಡಿದ್ದಾರಾ ಅಥವಾ ಸಬ್ ರಿಜಿಸ್ಟರ್ ಕಛೇರಿಯಲ್ಲೆ ಮೋಸ ನಡೆದಿದೆಯೇ. ಇಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಎರಡೆರಡು ದಾಖಲೆ ಮಾಡಿ ಮೋಸ ಮಾಡಿದ್ದಾರಾ. ನಮ್ಮ ವಕೀಲರು ಎಲ್ಲವನ್ನೂ ನೋಡಿಯೇ ನಿವೇಶನ ಖರೀದಿ ಮಾಡಿದ್ದಾರೆ. ಈ ಸೈಟ್ ತಮ್ಮದು ಎಲ್ಲಾ ದಾಖಲೆ ತಮ್ಮ ಬಳಿ ಇದೆ ಎಂಬುದು ಪುಷ್ಪಾ ಅವರ ವಾದವಾಗಿದೆ.
ಒಟ್ಟಿನಲ್ಲಿ ಇಬ್ಬರ ಬಳಿಯಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳು ಮಾಡಿರುವ ಯಡವಟ್ಟು ಸ್ಪಷ್ಟವಾಗಿ ಕಾಣುತ್ತದೆ. ಇ-ಸ್ವತ್ತು ಮಾಡುವಾಗ ಪಿಡಿಓ ಅಥವಾ ಕಾರ್ಯದರ್ಶಿ ಸ್ಥಳಕ್ಕೆ ಬಂದು ಮಹಜರು ನಡೆಸಬೇಕಿತ್ತು. ಆದರೆ ಇದ್ಯಾವುದನ್ನು ಮಾಡದೆ ಕಚೇರಿಯಲ್ಲಿಯೇ ಕುಳಿತು ಇಬ್ಬಿಬ್ಬರಿಗೆ ಖಾತೆ, ಸರ್ವೆ ನಂಬರ್ ಇ-ಸ್ವತ್ತು ಮಾಡಿಕೊಟ್ಟಿರುವುದು ಅಧಿಕಾರಿಗಳ ಲೋಪವಾಗಿದೆ. ಈ ಬಗ್ಗೆ ನ್ಯಾಯಾಲಯ ನೀಡುವ ತೀರ್ಪು ಅಂತಿಮವಾಗಿದ್ದು ನಿವೇಶನ ಯಾರಿಗೆ ಸೇರಿದೆ ಎಂಬುದು ತಿಳಿಯಲಿದೆ.



