Wednesday, February 4, 2026
Google search engine

Homeರಾಜ್ಯತುಮಕೂರಿನಲ್ಲಿ ತೆಂಗು ರೋಗ ವ್ಯಾಪಕ, ರೈತರ ಬೇಸರ ಹೆಚ್ಚಳ

ತುಮಕೂರಿನಲ್ಲಿ ತೆಂಗು ರೋಗ ವ್ಯಾಪಕ, ರೈತರ ಬೇಸರ ಹೆಚ್ಚಳ

ತುಮಕೂರು : ಕಲ್ಪತರು ನಾಡು ಎಂದೇ ಹೆಸರಾದ ತುಮಕೂರಿನ ಕೊಬ್ಬರಿಗೆ ಇದೀಗ ಎಲ್ಲಿಲ್ಲದ ಬೆಂಬಲ ಬೆಲೆ ಸಿಕ್ಕಿದೆ. ಹಿಂದೆಂದು ಕಂಡರಿಯದ ದಾಖಲೆ ಮೊತ್ತ ದತ್ತ ಕೊಬ್ಬರಿ ಸಮೀಪಿಸಿದೆ. ಹೀಗಿದ್ದರೂ ರೈತರ ಮೊಗದಲ್ಲಿ ಮಂದಹಾಸ ಬದಲಿಗೆ ಬೇಸರ ಮನೆಮಾಡಿದೆ. ತೆಂಗು ಬೆಳೆಗೆ ತಲೆದೂರಿದ ನಾನಾ ಕಾಯಿಲೆಗಳು ಇಳುವರಿ ಕಡಿಮೆ ಮಾಡಿದೆ. ಇದರಿಂದ ಆದಾಯಕ್ಕೆ ತಕ್ಕ ಪ್ರತಿಫಲ‌‌ ಸಿಕ್ಕರೆ ಹೆಚ್ಚು ಎಂಬುವಂತಾಗಿದೆ ರೈತರ ಬದುಕು.

ಕಲ್ಪತರು ನಾಡಿನ ಹೆಮ್ಮೆಯ ತೆಂಗು ಬೆಳೆ ಇದೀಗ ರೈತರ ಕಣ್ಣೀರಿಗೆ ಕಾರಣವಾಗಿದೆ. ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ಸಿಕ್ಕರೂ, ಅನ್ನದಾತನಿಗೆ ಲಾಭ ಮಾತ್ರ ದೂರದ ಬೆಟ್ಟವಾಗಿದೆ. ಕೊಬ್ಬರಿ ಮಾರಾಟ ಮಾಡಿ ಕೈ ತುಂಬಾ ಹಣ ಬರಬಹುದು ಅನ್ನೋ ಕನಸಿಗೆ, ರೋಗ ಬಾಧೆ ನೀರೆರಚಿದಂತಾಗಿದೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು 1 ಲಕ್ಷ 76 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆದಿದ್ದು, ಈ ಪೈಕಿ ಶೇಕಡ 70ರಷ್ಟು ತೆಂಗು ಬೆಳೆಗೆ ನುಸಿಪೀಡೆ ಹಾಗೂ ಬೀಳೆ ತಲೆ ಹುಳು ರೋಗ ತಗುಲಿದೆ. ಹಾಗಾಗಿ ಇಳುವರಿಯಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದ್ದು, ಕಳೆದ ಒಂದು ವರ್ಷದಿಂದ ರೋಗ ಬಾಧೆಗೆ ರೋಸಿ ಹೋದ ರೈತರು ಕಂಗಾಲಾಗಿದ್ದಾರೆ.

ಇದು ಕೇವಲ ತುಮಕೂರು ಜಿಲ್ಲೆಯ ಸಮಸ್ಯೆಯಲ್ಲ. ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತೆಂಗು ಬೆಳೆಗೆ ರೋಗ ವ್ಯಾಪಕವಾಗಿ ಹರಡಿದೆ. ಆದರೆ ರೋಗ ನಿಯಂತ್ರಣಕ್ಕೆ ಕೃಷಿ ಇಲಾಖೆ ಹಾಗೂ ಸರ್ಕಾರ ಸೂಕ್ತ ಕ್ರಮಕೈಗೊಳ್ಳದೇ ಇದ್ದುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೋಗ ಬಾಧೆಯಿಂದ ಇಳುವರಿ ಕುಸಿತವಾದ ಪರಿಣಾಮ ಕೊಬ್ಬರಿ ಬೆಲೆ ಗಗನಕ್ಕೇರಿದೆ. ಕ್ವಿಂಟಾಲ್‌ಗೆ 30 ಸಾವಿರ ರೂಪಾಯಿ ತಲುಪಿದ ಕೊಬ್ಬರಿ, ದಾಖಲೆ ಮೊತ್ತ ದತ್ತ ದಾಪುಗಾಲು ಇಡುತ್ತಿದೆ. ಇನ್ನು ಕಳೆದ ಜೂನ್‌ನಲ್ಲಿ ಸಹ ಇದೇ ರೀತಿ ಬೆಲೆ ಏರಿಕೆ ಕಂಡಿದ್ದು, ಆ ಸಂದರ್ಭದಲ್ಲಿ 31 ಸಾವಿರ ತಲುಪಿ ಬಳಿಕ 25 ಸಾವಿರಕ್ಕೆ ಇಳಿದಿತ್ತು. ಈಗ ಮತ್ತೆ ಬೆಲೆ ಏರಿಕೆಯಾದರೂ, ಬೆಳೆಗೆ ರೋಗ ತಗುಲಿರುವುದರಿಂದ ರೈತರಿಗೆ ನೋವಾಗಿ ಪರಿಣಮಿಸಿದೆ. ಈ ಸಂಕಷ್ಟದ ಲಾಭ ಪಡೆಯಲು ಕೇರಳ ಹಾಗೂ ತಮಿಳುನಾಡಿನ ರೈತರು ತುದಿಗಾಲಲ್ಲಿ ನಿಂತಿದ್ದು, ತೆಂಗು ಬೆಳಗಾರರಿಗೆ ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದೆ.

RELATED ARTICLES
- Advertisment -
Google search engine

Most Popular