Friday, February 6, 2026
Google search engine

Homeರಾಜ್ಯಸುದ್ದಿಜಾಲಹಾಲಿನ ಕಲಬೆರೆಕೆ ದಂಧೆ : ಜಿಲ್ಲಾಡಳಿತ ದಾಳಿ

ಹಾಲಿನ ಕಲಬೆರೆಕೆ ದಂಧೆ : ಜಿಲ್ಲಾಡಳಿತ ದಾಳಿ

ಕೋಲಾರ : ಜಿಲ್ಲೆಯ ಖಾಸಗಿ ಹಾಲಿನ ಕೇಂದ್ರಗಳಲ್ಲಿ ನಡೆಯುತ್ತಿದೆ ಎನ್ನಲಾದ ಕಲಬೆರೆಕೆ ಹಾಲಿನ ಕರಾಳ ದಂಧೆಯನ್ನು ಬೇರುಸಹಿತ ಕಿತ್ತೆಸೆಯಲು ಜಿಲ್ಲಾಡಳಿತ ಇಂದು ನಸುಕಿನ ಜಾವವೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹಾಲಿನಲ್ಲಿ ವಿಷಕಾರಿ ಅಂಶಗಳನ್ನು ಬೆರೆಸಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಕೇಂದ್ರಗಳ ಮೇಲೆ ಜಿಲ್ಲಾಡಳಿತ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಬ್ರಹಾಸ್ತ್ರ ಪ್ರಯೋಗಿಸಿದೆ.

ಈ ಬಗ್ಗೆ ಕಳೆದ ಕೆಲವು ದಿನಗಳಿಂದ ಖಾಸಗಿ ಹಾಲಿನ ಸಂಗ್ರಹಣಾ ಕೇಂದ್ರಗಳಲ್ಲಿ ಕಲಬೆರೆಕೆ ನಡೆಯುತ್ತಿದೆ ಎಂಬ ದೂರುಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಹಾಗೂ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್‌, ರಹಸ್ಯ ಕಾರ್ಯಾಚರಣೆಗೆ ನೀಲನಕ್ಷೆ ಸಿದ್ಧಪಡಿಸಿ, ಅದರಂತೆ ಬೆಳಗಿನ ಜಾವ 2.30ಕ್ಕೆ ಆಹಾರ ಸುರಕ್ಷತಾ ಇಲಾಖೆಯ 30 ವಿಶೇಷ ತಂಡಗಳು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿದವು.

ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಕೇಶ್‌ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ಚಿಲ್ಲಿಂಗ್‌ ಸೆಂಟರ್‌ ಹಾಗೂ ಹಾಲಿನ ಉತ್ಪಾದನಾ ಘಟಕಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಅಧಿಕಾರಿಗಳು, ಯಾವುದೇ ದಾಖಲೆಗಳಿಲ್ಲದ ಹಾಗೂ ಸಂಶಯಾಸ್ಪದವಾಗಿ ಕಂಡುಬಂದ ಒಟ್ಟು 40 ಹಾಲಿನ ಮಾದರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮಾದರಿಗಳನ್ನು ಕೂಡಲೇ ಬೆಂಗಳೂರಿನ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.

1,120 ಲೀಟರ್‌ ಹಾಲು ವಶ : ಈ ಬೃಹತ್‌ ಕಾರ್ಯಾಚರಣೆಯ ಹಾದಿಯಲ್ಲಿ ಮುಳಬಾಗಿಲು ತಾಲೂಕಿನ ಸಿ.ಕೊರವನೂರು ಗ್ರಾಮದಲ್ಲಿ ಅಧಿಕಾರಿಗಳಿಗೆ ಮಹತ್ವದ ಯಶಸ್ಸು ಸಿಕ್ಕಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡವು ಅಕ್ರಮವಾಗಿ ಹಾಲನ್ನು ಸಾಗಾಟ ಮಾಡುತ್ತಿದ್ದ ಬೊಲೆರೋ ವಾಹನವನ್ನು ತಡೆದು ತಪಾಸಣೆ ನಡೆಸಿದೆ.

ಈ ವೇಳೆ ವಾಹನದಲ್ಲಿದ್ದ 28 ಕ್ಯಾನ್‌ಗಳಲ್ಲಿ ತುಂಬಿದ್ದ ಸುಮಾರು 1,120 ಲೀಟರ್‌ ಕಲಬೆರೆಕೆ ಹಾಲನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ. ಈ ಸಂಬಂಧ ವಾಹನದ ಚಾಲಕ ಹಾಗೂ ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು, ಜಿಲ್ಲೆಯ ತಾಯಂದಿರು ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕಲಬೆರೆಕೆ ಹಾಲಿನ ದಂಧೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹಾಲಿನಲ್ಲಿ ವಿಷಕಾರಕ ಅಂಶಗಳನ್ನು ಬೆರೆಸುವುದು ಅತ್ಯಂತ ಗಂಭೀರ ಅಪರಾಧ. ಇಂತಹ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಪರವಾನಗಿ ರದ್ದುಪಡಿಸುವುದಲ್ಲದೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular