Saturday, February 7, 2026
Google search engine

Homeರಾಜ್ಯಗಂಜಿಮಠ ಟೋಲ್‌ಗೇಟ್ ಗೆ‌ ವಿವಿಧ ಸಂಘಟನೆಗಳ ಪ್ರತಿನಿಧಿಗಳ ನಿಯೋಗ ಭೇಟಿ

ಗಂಜಿಮಠ ಟೋಲ್‌ಗೇಟ್ ಗೆ‌ ವಿವಿಧ ಸಂಘಟನೆಗಳ ಪ್ರತಿನಿಧಿಗಳ ನಿಯೋಗ ಭೇಟಿ

ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವ ಗಂಜಿಮಠ ಟೋಲ್ ಪ್ಲಾಜ಼ಾ ಕ್ಕೆ ವಿವಿಧ ಸಂಘಟನೆಗಳ ಪ್ರಮುಖರನ್ನು ಒಳಗೊಂಡ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಇಂದು ಭೇಟಿ ನೀಡಿ ನಿಯಮಗಳ ಪಾಲನೆಯ ಕುರಿತಾಗಿ ಪರಿಶೀಲನೆ ನಡೆಸಿತು. ಟೋಲ್ ಗೇಟ್ ಗಳ ನಡುವಿನ ಅಂತರ ಕನಿಷ್ಟ 60 ಕಿ ಮೀ ಇರಬೇಕು ಎಂಬ ನಿಯಮವನ್ನು ಗಾಳಿಗೆ ತೂರಿ ಟೋಲ್ ಪ್ಲಾಜ಼ಾ ನಿರ್ಮಾಣ ಗೊಳ್ಳುತ್ತಿರುವುದನ್ನು ಸಮಿತಿ ಗಮನಿಸಿತು.‌
ಬ್ರಹ್ಮರಕೂಟ್ಲು ಟೋಲ್ ಗೇಟ್ ಹಾಗು ತಲಪಾಡಿ ಟೋಲ್ ಗೇಟ್ ನಿಂದ ಗಂಜಿಮಠ ಟೋಲ್ ಪ್ಲಾಜ಼ಾ 33 ಕಿ ಮೀ ಹಾಗು 34 ಕಿ ಮೀ ಅಂತರವನ್ನು ಮಾತ್ರ ಹೊಂದಿದೆ. ಹಾಗೆಯೆ ಹೆಜಮಾಡಿ ಟೋಲ್ ಗೇಟ್ ನಿಂದ 44 ಕಿ ಮೀ ದೂರದಲ್ಲಿದೆ. ಈ ರೀತಿ ಕಡಿಮೆ ಅಂತರದಲ್ಲಿ ಟೋಲ್ ಸಂಗ್ರಹ‌ ಕೇಂದ್ರಗಳನ್ನು ರಚಿಸಲು ಹೆದ್ದಾರಿ ಪ್ರಾಧಿಕಾರ ರೂಪಿಸಿರುವ ನಿಮಯಗಳ ಪ್ರಕಾರ ಅವಕಾಶ ಇರುವುದಿಲ್ಲ. ಗಂಜಿಮಠದಲ್ಲಿ ಟೋಲ್ ಗೇಟ್ ನಿರ್ಮಾಣ ನಿಯಮಗಳ ನಿರ್ಲಜ್ಜ ಉಲ್ಲಂಘನೆಯಾಗುತ್ತಿದೆ, ಪ್ರಯಾಣಿಕರ ಸುಲಿಗೆಗೆ ಅವಕಾಶ ಕೊಡುತ್ತದೆ. ಸಾರ್ವಜನಿಕರಿಗೆ ಯಾವುದೆ ಮಾಹಿತಿ ಕೊಡದೆ, ಅಹವಾಲು ಸಭೆ ನಡೆಸದೆ ಟೋಲ್ ಪ್ಲಾಜ಼ಾ ತೆರೆಯುವ ಪ್ರಯತ್ನವನ್ನು ಯಾವುದೆ ಕಾರಣಕ್ಕೆ ಒಪ್ಪಲಾಗದು ಎಂದು ಹೋರಾಟ ಸಮಿತಿಯ ನಿಯೋಗ ತಿಳಿಸಿದೆ.
ಹಾಗೆಯೇ ಗಂಜಿಮಠ ಸೇರಿದಂತೆ ಉಪ್ಪಿನಂಗಡಿಯ ವಳಾಲು, ಬೆಳ್ತಂಗಡಿ ರಸ್ತೆಯ ಪಣಪಿಲ ಬಳಿ ಟೋಲ್ ಪ್ಲಾಜ಼ಾಗಳು ನಿರ್ಮಾಣ ಹಂತದಲ್ಲಿದೆ. ಈ ಮೂಲಕ ಜಿಲ್ಲೆಯಲ್ಲಿ‌ ಆರು ಟೋಲ್ ಗೇಟ್ ಗಳು ಸುಂಕ ವಸೂಲಿಗೆ ತೊಡಗಲಿದೆ. ಇದು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರ ಮಟ್ಟಿಗೆ ಭಯಾನಕ ಸ್ಥಿತಿಯನ್ನು‌ ಉಂಟು ಮಾಡಲಿದೆ ಎಂದು ಹೋರಾಟ ಸಮಿತಿ ಆತಂಕ ವ್ಯಕ್ತಪಡಿಸಿದೆ. ವಳಾಲು ಹಾಗು ಪಣಪಿಲ ಟೋಲ್ ಪ್ಲಾಜ಼ಾಗಳೂ ಸಹ ಅಂತರದ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘಿಸಿ ನಿರ್ಮಾಣಗೊಳ್ಳುತ್ತಿದೆ. ವಳಾಲು ಟೋಲ್ ಪ್ಲಾಜ಼ಾ ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಂದ 35 ಕಿ ಮೀ ಅಂತರ ಹೊಂದಿದ್ದರೆ, ಮಡಂತ್ಯಾರು ಟೋಲ್ ಪ್ಲಾಜ಼ಾ ಬ್ರಹ್ಮರಕೂಟ್ಲು ವಿನಿಂದ ಕೇಲವ 27 ಕಿ ಮೀ ಅಂತರ ಮಾತ್ರ ಹೊಂದಿದೆ. ಈ ಯಾವ ಟೋಲ್ ಗೇಟ್ ಗಳೂ ಅಂತರ ನಿಯಮವಾದ 60 ಕಿ ಮೀ ಯ ಹತ್ತಿರಕ್ಕೂ ಸುಳಿಯುತ್ತಿಲ್ಲ ಎಂಬ ಅಂಶವನ್ನು ಹೋರಾಟ ಸಮಿತಿಯ ನಿಯೋಗ ಬೊಟ್ಟು ಮಾಡಿ ತೋರಿಸಿದೆ.
ಈ ಟೋಲ್ ಗೇಟ್ ಗಳು ಕಾರ್ಯಾಚರಣೆ ಆರಂಭಿಸಿದರೆ ಜಿಲ್ಲೆಯ ಹೆದ್ದಾರಿಗಳನ್ನು‌ ದಾಟುವುದು ವಾಹನ ಸವಾರರ ಪಾಲಿಗೆ ಚಕ್ರವ್ಯೂಹವನ್ನು ಬೇಧಿಸಿದಷ್ಟು ಸವಾಲಿನ‌ ಕೆಲಸವಾಗಲಿದೆ. ಜನತೆ ಹೆದ್ದಾರಿಯಲ್ಲಿ ಪ್ರಯಾಣಿಸಲೆ ಭಯ ಪಡುವ ಸ್ಥಿತಿ ನಿರ್ಮಾಣಗೊಳ್ಳಲಿದೆ. ಇದು ಜಿಲ್ಲೆಯ ವ್ಯಾಪಾರ, ಉದ್ಯಮ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.
ಇಷ್ಟೆಲ್ಲಾ ಗಂಭೀರ ಸ್ಥಿತಿ ಇದ್ದರೂ ಜಿಲ್ಲೆಯ ಸಂಸದರು, ಶಾಸಕರುಗಳು ಈ ಕುರಿತು ತಲೆ ಕೆಡಿಸಿಕೊಳ್ಳದಿರುವುದು ಅಚ್ಚರಿಯ ಸಂಗತಿ ಎಂದು ಹೇಳಿರುವ ಸಮಿತಿ, ಅಕ್ರಮ ಟೋಲ್ ಗೇಟ್ ಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮೌನ ಸಮ್ಮತಿ ತೋರುತ್ತಿದ್ದಾರೆ ಎಂದು ದೂರಿದೆ.

ಈ ಕುರಿತಾಗಿ ಜಿಲ್ಲೆಯ ಸಂಸದರು, ಶಾಸಕರುಗಳ ಉಪಸ್ಥಿತಿಯಲ್ಲಿ ನಾಗರಿಕರನ್ನು ಒಳಗೊಂಡು ಜಿಲ್ಲಾಡಳಿತ ಹೆದ್ದಾರಿ ಪ್ರಾಧಿಕಾರದ ಆಲಿಕೆ ಸಭೆ ನಡೆಸಬೇಕು, ಟೋಲ್ ಗೇಟ್ ಗಳ ಸ್ಥಾಪನೆಗಳಲ್ಲಿ ಅಂತರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕು, ನಿಯಮಗಳ ಪಾಲನೆಯನ್ನು ಖಾತರಿ ಪಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ಈ ಕುರಿತು ನಿರಾಸಕ್ತಿ ತೋರಿದರೆ ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಟೋಲ್ ಗೇಟ್ ಗಳಿಂದ ಸ್ಥಳೀಯ ಹೋರಾಟ ಸಮಿತಿಗಳನ್ನು ರಚಿಸಿ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಏಕಕಾಲದಲ್ಲಿ ಪಾದಯಾತ್ರೆಗಳನ್ನು ಸಂಘಟಿಸುವುದಾಗಿ ಸಮಿತಿಯ ನಿಯೋಗ ಎಚ್ಚರಿಸಿದೆ.
ಈ ನಿಯೋಗದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಪ್ರಾಂತ ರೈತ ಸಂಘದ ಪ್ರಮುಖರಾದ ಕೆ ಯಾದವ ಶೆಟ್ಟಿ, ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಕಾರ್ಮಿಕ ಮುಖಂಡರಾದ ನೋಣಯ್ಯ ಗೌಡ ಎಡಪದವು, ಹೊನ್ನಯ್ಯ ಅಮೀನ್ ತಿರುವೈಲು, ಡಿವೈಎಫ್ಐ ಮುಖಂಡರಾದ ನ್ಯಾಯವಾದಿ ಮನೋಜ್ ವಾಮಂಜೂರು, ರೈತಸಂಘದ ಆಲ್ವಿನ್ ಮಿನೇಜಸ್ ಮೂಡಬಿದ್ರೆ, ಭಾರತೀಯ ರೖತ ಸೇನೆ ಮೂಡಬಿದ್ರೆ ಘಟಕಾಧ್ಯಕ್ಷ ಹರಿಪ್ರಸಾದ್, ಸಾಮಾಜಿಕ ಕಾರ್ಯಕರ್ತರಾದ ಆನಂದ ಬಂಗೇರ, ಮಹಾಲಿಂಗ ನಾಯ್ಕ್ ಮಾಸ್ಟರ್,
ಅಬ್ದುಲ್ ಮಜೀದ್ ಅಮ್ಮುಂಜೆ, ಕಾಂಗ್ರೆಸ್ ಮುಖಂಡರುಗಳಾದ ಇಕ್ಬಾಲ್ ಅಲಿಯಾರ್,
ಅನ್ವರ್ ಕುಪ್ಪೆಪದವು, ಪತ್ರಕರ್ತರಾದ
ಬಾವ ಪದರಂಗಿ, ಸಾಮಾಜಿಕ ಮುಖಂಡರಾದ ಖಾದರ್ ಇಡ್ಮ, ಅಬ್ದುಲ್ ಖಾದರ್ ಸುರಲ್ಪಾಡಿ, ಬಾಬು ಸಾಲ್ಯಾನ್, ಹಮೀದ್ ಸಾಗರ್, ನಾಸಿರ್ ಅದ್ಯಪಾಡಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular