Tuesday, February 10, 2026
Google search engine

Homeರಾಜ್ಯಮಕ್ಕಳಿಗೆ ಮಕ್ಕಳ ರಕ್ಷಣಾ ನೀತಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆ ಕುರಿತು ಅರಿವು ಕಾರ್ಯಾಗಾರ

ಮಕ್ಕಳಿಗೆ ಮಕ್ಕಳ ರಕ್ಷಣಾ ನೀತಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆ ಕುರಿತು ಅರಿವು ಕಾರ್ಯಾಗಾರ

ಶೈಕ್ಷಣಿಕ ಸಂಸ್ಥೆಗಳು ಕೇವಲ ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತವಾಗದೆ ಮಕ್ಕಳ ರಕ್ಷಣೆಯಲ್ಲೂ  ಬಹುಮುಖ್ಯ ಪಾತ್ರವಹಿಸುವ ಅಗತ್ಯವಿದೆ. ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ರಕ್ಷಣೆಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ  ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ ತಿಪ್ಪೇಸ್ವಾಮಿ  ಹೇಳಿದರು.
    ಅವರು  ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ  ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂಬಂಧಿಸಿದ ಇಲಾಖೆಗಳು, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಶಾಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರಾದ ಮಕ್ಕಳ ರಕ್ಷಣಾಧಿಕಾರಿಗಳು ಮತ್ತು ಮಕ್ಕಳ ರಕ್ಷಣಾ ಸಮಿತಿಯಲ್ಲಿ ಸದಸ್ಯರಾಗಿರುವ ಮಕ್ಕಳಿಗೆ ಮಕ್ಕಳ ರಕ್ಷಣಾ ನೀತಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
     ರಾಜ್ಯಾದ್ಯಂತ ಶಾಲಾ ಆವರಣದಲ್ಲಿ ಅಥವಾ ಶಾಲಾ ಚಟುವಟಿಕೆ ಸಂದರ್ಭದಲ್ಲಿ  ಮಕ್ಕಳು ಸಾವನ್ನಪ್ಪುವ  ಅನೇಕ ಘಟನೆಗಳು ಸಂಭವಿಸಿದ್ದು,  ಈ ಬಗ್ಗೆ ಶಿಕ್ಷಕರು ಹೆಚ್ಚಿನ ಗಮನಹರಿಸಿ  ಶಾಲಾ ಆವರಣದಲ್ಲಿ ಮಕ್ಕಳಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಬೇಕು. ಮಕ್ಕಳು ಮನೆಯಲ್ಲಿ ಹೇಗೆ ಸುರಕ್ಷಿತರಾಗಿರುತ್ತಾರೋ ಅದೇ ರೀತಿ  ಶಾಲೆಯಲ್ಲಿ ಕಳೆಯುವ ದಿನದ 8 ಗಂಟೆಯೂ ಕೂಡ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು. ಈ ನಿಟ್ಟಿನಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕಾನೂನಾತ್ಮಕ ಪೋಷಕರಾಗಿ ಕಾರ್ಯನಿರ್ವಹಿಸಬೇಕು.  ಶಿಕ್ಷಕರು ಪಠ್ಯಕ್ಕೆ ನೀಡುವ ಆದ್ಯತೆಯನ್ನು ಮಕ್ಕಳ ಸುರಕ್ಷತೆಗೂ ನೀಡಬೇಕು ಎಂದು ಅವರು ಹೇಳಿದರು.
    ಮಕ್ಕಳ ಮೇಲಾಗುವ ದೈಹಿಕ ದಂಡನೆ, ದೌರ್ಜನ್ಯ, ಮಾನಸಿಕ ಮತ್ತು ಲೈಂಗಿಕ ಕಿರುಕುಳ, ಮುಂತಾದ ಮಕ್ಕಳ ಸಮಸ್ಯೆಗಳನ್ನು   ವ್ಯಕ್ತಪಡಿಸಲು  ಭಯ ಮುಕ್ತ  ವಾತಾವರಣವನ್ನು ಕಲ್ಪಿಸಿಕೊಡಬೇಕು  ಎಂದು ಅವರು ಹೇಳಿದರು.  ದಕ್ಷಿಣ ಕನ್ನಡ ಜಿಲ್ಲೆ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಯಲ್ಲಿ ಕಾರ್ಯನಿರ್ವಹಿಸಿ ಬೇರೆ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು. 10 ವರ್ಷ ಕಳೆದರೂ  ರಾಜ್ಯದಲ್ಲಿ  ಮಕ್ಕಳ ರಕ್ಷಣಾ ನೀತಿ ಪರಿಪೂರ್ಣವಾಗಿ  ಅನುಷ್ಠಾನಗೊಂಡಿಲ್ಲ. ಈ ನಿಟ್ಟಿನಲ್ಲಿ ಪ್ರತಿ  ಶೈಕ್ಷಣಿಕ ಸಂಸ್ಥೆಯಲ್ಲೂ ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸುವುದು ಅತ್ಯವಶ್ಯಕವಾಗಿದೆ. ಮಕ್ಕಳ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಒದಗಿಸಬೇಕು  ಎಂದು ಅವರು ಹೇಳಿದರು.
        ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಡಾ.ಅಕ್ಷತಾ ಆದರ್ಶ್ ಮಾತನಾಡಿ, ಮಕ್ಕಳ ಮೇಲೆ ಶೋಷಣೆಗಳಾಗುತ್ತಿದ್ದು, ಅನೇಕ ಮಾನಸಿಕ  ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮಕ್ಕಳಲ್ಲಿ ಶಾಲೆಗಳೆಂದರೆ ಭಯ ಬೀಳುವಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ನೀತಿ ಬಗ್ಗೆ ಪ್ರತಿಯೊಂದು ಶಾಲೆಗಳು ತಿಳಿದುಕೊಂಡಿರಬೇಕು. ಮಕ್ಕಳನ್ನು ಅಂಕಗಳ ಮಾಪನದಲ್ಲಿ ಅಳತೆ ಮಾಡದೆ  ಅವರಿಗೆ ಮಾನವೀಯ ಮೌಲ್ಯಗಳನ್ನು  ತಿಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ  ಮಂಗಳೂರು ನಗರ ಶಿಕ್ಷಣಾಧಿಕಾರಿ ಮನೋರಮ,  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ರೆನ್ನಿ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಸ್ವಾಗತಿಸಿದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular