ಗುಬ್ಬಿ : ಕಾನೂನು ಸುವ್ಯವಸ್ಥೆಗೆ ಅತ್ಯಗತ್ಯ 280 ಸಿಸಿ ಕ್ಯಾಮೆರಾಗಳನ್ನು ಎಚ್ಎಎಲ್ ಘಟಕದ ಸ್ಥಳೀಯ ಅಭಿವೃದ್ದಿ ಸಿ ಆರ್ ಫಂಡ್ ಮೂಲಕ ಖರೀದಿ ಮಾಡಲಾಗುತ್ತಿದ್ದು, ಎರಡು ತಿಂಗಳಲ್ಲಿ ಎಲ್ಲಾ ಪ್ರಮುಖ ರಸ್ತೆಗೆ ಗಡಿ ಭಾಗದಿಂದ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಶಾಸಕ ಆರ್.ಶ್ರೀನಿವಾಸ್ ತಿಳಿಸಿದ್ದಾರೆ.
ಈ ಬಗ್ಗೆ ತಾಲೂಕಿನ ಚೇಳೂರು ಹೋಬಳಿಯ ನಾಲ್ಕು ಗ್ರಾಮದಲ್ಲಿ ಸುಮಾರು 7 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಅಪಘಾತ ವಲಯಗಳು ಹಾಗೂ ಜನಸಂದಣಿಯ ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆ ಆಗಲಿದ್ದು, ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳು ಕ್ಯಾಮೆರಾ ನಿರ್ವಹಣೆ ನಡೆಸಬೇಕಿದೆ ಎಂದರು.
ಮುಂದುವರೆದು, ಹೇಮಾವತಿ ಕುಡಿಯುವ ನೀರಿನ ಯೋಜನೆಯಲ್ಲಿ ಹಾಗಲವಾಡಿ ಕೆರೆಗೆ ನೀರು ಹರಿಯಲು ಶೇಕಡಾ 5 ರಷ್ಟು ಕೆಲಸ ಬಾಕಿಯಿದ್ದು, ಶೀಘ್ರದಲ್ಲಿ ಪೂರ್ಣ ಗೊಳ್ಳಲಿದೆ. ಹಾಗೂ ಬಿಕ್ಕೇಗುಡ್ಡ ಯೋಜನೆ ಕಾಮಗಾರಿ ಆರಂಭವಾಗಿದೆ. ಅದು ಕೂಡ ಬಹುಬೇಗ ಪೂರ್ಣಗೊಳ್ಳಲಿದೆ ಎಂದರಲ್ಲದೆ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವ ಪ್ರತಿಕ್ರಿಯೆ ನೀಡುವುದಿಲ್ಲ. ಏನೂ ಗೊತ್ತಿಲ್ಲದ ವಿಚಾರ ಮಾಧ್ಯಮ ಮುಂದೆ ಪ್ರಸ್ತಾಪ ಮಾಡುವ ಅಗತ್ಯವಿಲ್ಲ ಎಂದು ಪಕ್ಷದ ಶಿಸ್ತು ಬದ್ಧತೆ ಪ್ರದರ್ಶಿಸಿದರು.
ಇನ್ನೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ಮಾತು ಆಕ್ರೋಶಕ್ಕೆ ಒಳಗಾಗಿತ್ತು. ಕೆಲ ಹೊಸ ಶಾಸಕರು ಅವರನ್ನು ರೊಚ್ಚಿಗೆಬ್ಬಿಸಿದ ಹಿನ್ನಲೆ ಆವೇಶದ ನುಡಿಗಳು ಬಂದಿವೆ ಹೊರತು ಉದ್ದೇಶ ಪೂರ್ವಕವಾಗಿ ಮಾತನಾಡುವವರಲ್ಲ. ಅವರ ಬಾಯಿಂದ ಕೆಲ ಶಬ್ದಗಳು ಬರಬಾರದಿತ್ತು ಎಂದ ಅವರು ತಾಲೂಕಿನಲ್ಲಿ 92 ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭವಾಗಿದೆ. ಈ ಪೈಕಿ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭವಾಗಿದೆ ಎಂದರು.
ಎತ್ತಿನಹೊಳೆ ಯೋಜನೆಯ ಅನುದಾನದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಸುಮಾರು 6.50 ಕೋಟಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಮುತ್ತಯ್ಯನಹಟ್ಟಿ ರಸ್ತೆಗೆ 2 ಕೋಟಿ, ನಿಂಬೆಕಟ್ಟೆ ರಸ್ತೆಗೆ 2.20 ಕೋಟಿ, ಕಾಶೀಮಠ ಗ್ರಾಮದಲ್ಲಿ 2.15 ಕೋಟಿ ಹಾಗೂ ಸೆಣಬನಹಳ್ಳಿ ಗ್ರಾಮದಲ್ಲಿ 50 ಲಕ್ಷದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಯಿತು ಎಂದ ಅವರು ಎತ್ತಿನಹೊಳೆ ಯೋಜನೆಯ ನೂರು ಕೋಟಿ ರೂಗಳ ರಸ್ತೆ ಕಾಮಗಾರಿಗಳು ಎರಡು ಹೋಬಳಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯತೀಶ್, ಶಿವಾಜಿರಾವ್, ಕೃಷ್ಣೋಜಿರಾವ್, ಮೂರ್ತಪ್ಪ, ಮೈಲಾರಯ್ಯ, ಶಿವಲಿಂಗಯ್ಯ, ರಮೇಶ್ ಪಿಡಿಓಗಳಾದ ಅಶೋಕ್, ಯುವರಾಜ್ ಗುತ್ತಿಗೆದಾರರ ರಾಜು, ರವಿ ಇತರರು ಹಾಜರಿದ್ದರು.



