ವರದಿ : ಕುಪ್ಪೆ ಮಹದೇವಸ್ವಾಮಿ
ಕೆ.ಆರ್.ನಗರ : ಪಟ್ಟಣದ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಸತತವಾಗಿ ನಾಲ್ಕನೇ ಬಾರಿಗೆ ಕೆ.ಎನ್.ಬಸಂತ್ ಅವಿರೋಧವಾಗಿ ಆಯ್ಕೆಯಾದರು. ಇವರೊಂದಿಗೆ ಉಪಾಧ್ಯಕ್ಷರಾಗಿ ಮಹದೇವಯ್ಯ ಚುನಾಯಿತರಾದರು.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಇವರಿಬ್ಬರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿಯ ಅಧೀಕ್ಷಕ ಎಂ.ಎನ್.ಸೋಮಶೇಖರ್ ಆಯ್ಕೆ ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಹೆಚ್.ಎಸ್.ಲೋಕೇಶ್, ಕೆ.ಎನ್.ರಮೇಶ್ ರಾವ್ ಕದಂ, ಅಶೋಕ್ ಕುಮಾರ್, ಹೆಚ್.ಟಿ.ಗೋಪಾಲೇಗೌಡ, ಜೆ.ವೆಂಕಟೇಶ, ಎಂ.ಪಿ.ಸುಮತಿ, ವೀಣಾಕುಮಾರ್, ಮರಿಲಿಂಗಾಚಾರ್, ಸಿ.ಪಿಎಸ್ ಲೋಕೇಶ್, ಎಲ್.ರಂಗನಾಥ್, ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್, ಶಾಖಾ ವ್ಯವಸ್ಥಾಪಕ ಎಂ.ಪಿ.ಸುಹಾಸ್ ಇದ್ದರು.
ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎನ್.ಬಸಂತ್ ಮಾತನಾಡಿ ಪ್ರಸ್ತುತ ಕೆ.ಆರ್.ನಗರದಲ್ಲಿರುವ ಪ್ರಧಾನ ಕಛೇರಿಯ ಜತೆಗೆ ಪಿರಿಯಾಪಟ್ಟಣ, ಹುಣಸೂರು, ಹೂಟಗಳ್ಳಿ ಸೇರಿದಂತೆ 4 ಶಾಖಾ ಕಚೇರಿಗಳಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಜತೆಗೆ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೂ ವ್ಯವಹಾರ ವಿಸ್ತರಿಸಿ ಶಾಖಾ ಕಚೇರಿ ತೆರೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಸಣ್ಣ ಉದ್ಯಮ ನಡೆಸುವವರಿಗೆ ಬ್ಯಾಂಕಿನ ವತಿಯಿಂದ ಹೆಚ್ಚು ಸಾಲ ನೀಡಲು ಪ್ರಥಮ ಆದ್ಯತೆ ನೀಡಲಿದ್ದು ಇದರೊಂದಿಗೆ ಅರ್ಬನ್ ಬ್ಯಾಂಕ್ ವತಿಯಿಂದ ಸ್ವಂತ ಮೊಬೈಲ್ ಆಪ್ ಬಿಡುಗಡೆ ಮಾಡಿ ಎಟಿಎಂ ಕೇಂದ್ರಗಳನ್ನು ಹೆಚ್ಚಿಸಲಾಗುತ್ತದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಸಾಲ ವಸೂಲಾತಿಯಲ್ಲಿ ಶೇಕಡಾ 100ರಷ್ಟು ಗುರಿ ತಲುಪಿ ಆ ಮೂಲಕ ಬ್ಯಾಂಕಿನ ಎನ್ ಪಿಎ ಪ್ರಮಾಣವನ್ನು ಶೇಕಡ 0 ಗೆ ಇಳಿಕೆ ಮಾಡಲು ಗುರಿ ಹಾಕಿಕೊಳ್ಳಲಾಗಿದ್ದು ಇದಕ್ಕೆ ಸಾಲ ಪಡೆದವರು ಮತ್ತು ಸರ್ವ ಸದಸ್ಯರು ಹಾಗೂ ಗ್ರಾಹಕರು ಅಗತ್ಯ ಸಹಕಾರ ನೀಡಬೇಕು ಎಂದು ಕೋರಿಕೊಂಡರು.
ನಿರಂತರವಾಗಿ ನಾಲ್ಕು ಬಾರಿ ಬ್ಯಾಂಕಿನ ಅಧ್ಯಕ್ಷನಾಗಿ ಆಯ್ಕೆಯಾಗಲು ಬೆಂಬಲ ನೀಡಿದ ಹಿಂದಿನ ಮತ್ತು ಇಂದಿನ ಆಡಳಿತ ಮಂಡಳಿಯವರು ಮತ್ತು ಷೇರುದಾರ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಕೆ.ಎನ್.ಬಸಂತ್ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ದಿ. ಎಸ್.ನಂಜಪ್ಪ ಅವರನ್ನು ಸ್ಮರಣೆ ಮಾಡಿಕೊಂಡರು.



