Friday, February 13, 2026
Google search engine

Homeರಾಜಕೀಯಕುರ್ಚಿ ವಿವಾದದ ಮಧ್ಯೆ ಸಿಎಂ-ಡಿಸಿಎಂ ಒಂದೇ ವೇದಿಕೆಯಲ್ಲಿ ; ಕುತೂಹಲ ಮೂಡಿಸಿದ ಇಬ್ಬರ ನಡೆ

ಕುರ್ಚಿ ವಿವಾದದ ಮಧ್ಯೆ ಸಿಎಂ-ಡಿಸಿಎಂ ಒಂದೇ ವೇದಿಕೆಯಲ್ಲಿ ; ಕುತೂಹಲ ಮೂಡಿಸಿದ ಇಬ್ಬರ ನಡೆ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರವಾಸದಿಂದ ವಾಪಾಸ್‌‍ ಬಂದ ಬಳಿಕವೂ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ಮತ್ತೊಂದು ಮಗ್ಗುಲು ಬದಲಿಸಿದ್ದು, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜಹಟ್ಟಿಹೊಳಿ ಹೇಳಿದರೆ, ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್‌, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಕಾಂಗ್ರೆಸ್‌‍ ನಲ್ಲೂ ರೆಸಾರ್ಟ್‌ ರಾಜಕೀಯ ಶುರುವಾಗಲಿದೆ ಎಂದು ಹೇಳಲಾಗುತ್ತಿದ್ದು, ಗೋವಾದ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌‍ನ ಪ್ರಭಾವಿ ನಾಯಕರೊಬ್ಬರು 50ಕ್ಕೂ ಹೆಚ್ಚು ರೂಮ್‌ಗಳನ್ನೂ ಕಾಯ್ದಿರಿಸಿದ್ದಾರೆ ಎಂಬ ವದಂತಿಯೂ ಹರಿದಾಡಿತ್ತು. ಆದರೆ ಅದನ್ನು ತಳ್ಳಿ ಹಾಕಲಾಗಿದೆ ಎನ್ನಲಾಗಿದೆ.

ರಾಜಕೀಯ ಭಿನ್ನರಾಗಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಇಬ್ಬರ ನಡುವೆ ಅಷ್ಟೇನೂ ಮಾತುಕತೆ ನಡೆಯಲಿಲ್ಲ. ಒಬ್ಬರಿಗೊಬ್ಬರು ಔಪಚಾರಿಕವಾಗಿ ಮಾತುಕತೆ ನಡೆಸಿದರಾದರೂ, ಮೊದಲಿನ ಅನ್ಯೋನ್ಯತೆ ಕಂಡು ಬರಲಿಲ್ಲ. ಇಬ್ಬರು ತಮ್ಮ ಪಾಡಿಗೆ ತಾವು ಅನ್ಯಮನಸ್ಕರಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಮೊದಲು ಡಿ.ಕೆ.ಶಿವಕುಮಾರ್‌ ಅವರೇ ಮುಂದಾಗಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸುತ್ತಾ, ಕಾರ್ಯಕ್ರಮವನ್ನು ಚೇತೋಹಾರಿಯಾಗಿಡಲು ಯತ್ನಿಸುತ್ತಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಅಣೆಕಟ್ಟೆಗಳ ಸುರಕ್ಷತೆ ಕುರಿತು ಅಂತಾರಾಷ್ಟ್ರೀಯ ಸಮೇಳನ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ತಮ ಪಾಡಿಗೆ ತಾವು ಮೊಬೈಲ್‌ ನೋಡುವುದರಲ್ಲಿ ಅಥವಾ ಕಾಗದ ಪತ್ರಗಳನ್ನು ಓದುವುದರಲ್ಲಿ ಮಗ್ನರಾಗಿದ್ದರು.

ಸಮಯ ಕಳೆಯಲು ಡಿ.ಕೆ.ಶಿವಕುಮಾರ್‌ ಅವರು ಕಾರ್ಯಕ್ರಮ ಆಯೋಜಕರನ್ನು ಕರೆದು ಸಲಹೆ ಸೂಚನೆ ನೀಡುವ ಮೂಲಕ ಸಕ್ರಿಯವಾಗಿರಲು ಯತ್ನಿಸಿದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಅವರನ್ನೇ ನೋಡುತ್ತಲಿದ್ದರು. ಈ ಹಂತದಲ್ಲಿ ಸೌಜನ್ಯಕ್ಕಾದರೂ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಪರಸ್ಪರ ಮಾತನಾಡಲಿಲ್ಲ. ತಮ್ಮ ಪಾಡಿಗೆ ತಾವು ಇದ್ದು ಬಿಟ್ಟರು.

ಇನ್ನೂ ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಿದ್ದ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲಿ ವರಿಷ್ಠರ ಭೇಟಿಯ ಬಳಿಕ ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಲಾರಂಭಿಸಿದ್ಧಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಸಹೋದರರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿ ಹೊಳಿ, 2023ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ಡಿ.ಕೆ.ಶಿವಕುಮಾರ್‌ ಯಾವ ಸಂದರ್ಭದಲ್ಲಿ ಪಕ್ಷದ ಸಾರಥ್ಯ ವಹಿಸಿಕೊಂಡಿದ್ದರು ಎಂಬುದು ಗಮನಾರ್ಹ. ಸುಳ್ಳು ಆರೋಪದ ಮೇಲೆ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಲಾಗಿತ್ತು. ಕೋವಿಡ್‌ ಸಂದರ್ಭದಲ್ಲಿ ಕಾಂಗ್ರೆಸ್‌‍ನ ಎಲ್ಲರನ್ನೂ ದುಡಿಸಿಕೊಳ್ಳುವ ಮೂಲಕ ಪಕ್ಷ ಸಂಘಟಿಸಿದ್ದರು.

ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳಲ್ಲಿ ಕಾಂಗ್ರೆಸ್‌‍ ಗೆಲ್ಲುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಮೊದಲೇ ಅಂದಾಜಿಸಿದ್ದರು ಎಂದರೆ ಅವರು ಎಷ್ಟು ಪೂರ್ವತಯಾರಿ ನಡೆಸಿದ್ದರು ಎಂದು ಊಹಿಸಬಹುದು. ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಮೆಲ್ಲರ ಬಯಕೆಯಾಗಿದೆ ಎಂದರು.

ಗೋವಾದಲ್ಲಿ ರೆಸಾರ್ಟ್‌ ರಾಜಕಾರಣ ಮಾಡಲು ತಯಾರಿಯಾಗಿದೆ ಎಂಬುದು ಸುಳ್ಳು, ಡಿ.ಕೆ.ಶಿವಕುಮಾರ್‌ ಹುಟ್ಟಾ ಕಾಂಗ್ರೆಸ್ಸಿಗರು. ಯಾವತ್ತೂ ಅವರು ಗುಂಪುಗಾರಿಕೆ ಮಾಡುವುದಿಲ್ಲ. ರೆಸಾರ್ಟ್‌ ರಾಜಕೀಯ ಕಾಂಗ್ರೆಸ್‌‍ನಲ್ಲಿ ಇಲ್ಲ. ಅಧಿಕಾರ ಹಂಚಿಕೆ ಹೈಕಮಾಂಡ್‌ ನ ನಿರ್ಧಾರಕ್ಕೆ ಸಂಬಂಧಿಸಿದ ವಿಷಯ. ಅವರು ಯಾವತ್ತೂ ಸಮಯ ನಿಗದಿ ಮಾಡುತ್ತಾರೋ ಅಂದು ನೆರವೇರಲಿದೆ ಎಂದು ಹೇಳಿದರು.

ಕೊಪ್ಪಳದಲ್ಲಿ ಮಾತನಾಡಿರುವ ರಾಘವೇಂದ್ರ ಹಿಟ್ನಾಳ್‌, ಹೈಕಮಾಂಡ್‌ ನಾಯಕತ್ವ ಬದಲಾವಣೆಯಾಗಲಿದೆ ಎಂದು ಹೇಳಿಲ್ಲ. ಹಾಗೇ ಹೇಳದೆ ಇದ್ದರೆ ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸ ನಮಲ್ಲಿದೆ. ಸಚಿವ ಸಂಪುಟ ಪುನರ್‌ ರಚನೆಯೂ ಶೀಘ್ರದಲ್ಲೇ ನಡೆಯಲಿದೆ. ತಮಗೂ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular