ಧಾರವಾಡ : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಧಾರವಾಡ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಮತ್ತು ಜಿಲ್ಲಾ ಮಟ್ಟದ ಉದ್ಯೋಗ ಮೇಳ ಯಶಸ್ವಿಗೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಿದ್ಧತಾ ಸಭೆ ಜರುಗಿಸಿ, ಮಾತನಾಡಿದ ಅವರು, ಧಾರವಾಡ ಜಿಲ್ಲಾ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಎಲ್ಲ ಪದವಿ, ಐಟಿಐ ಕಾಲೇಜುಗಳ ಪದವಿಧರ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಹಿತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅರ್ಹತೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ದೊರೆಯಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗಲು ಸರ್ಕಾರದಿಂದಲೇ ಉದ್ಯೋಗ ಮೇಳ ಆಯೋಜಿಸಿ, ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಈ ಉದ್ಯೋಗ ಮೇಳ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.
ಅಲ್ಲದೆ ಉದ್ಯೋಗ ಮೇಳಕ್ಕೆ ಆಗಮಿಸುವವರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು. ಹಾಗೂ ಮೇಳಕ್ಕೆ ಆಗಮಿಸುವವರಿಗೆ ಸರಿಯಾದ ಮಾಹಿತಿ ಸಿಗುವಂತೆ ಸಹಾಯ ಕೇಂದ್ರಗಳನ್ನು ನಿರ್ವಹಿಸಬೇಕು ಎಂದರು.
ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಉದ್ಯೊಗ ಮೇಳದ ಯಶಸ್ವಿ ಆಯೋಜನೆಗೆ ವಿವಿಧ ರೀತಿಯ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿದಿನ ಪ್ರತ್ಯೇಕವಾಗಿ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ಜರುಗಿಸಿ, ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಲಲಿತಾ ಲಮಾಣಿ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಇದ್ದರು.
ಸಭೆಯಲ್ಲಿ ಉದ್ಯೋಗ ಮೇಳದ ಸಿದ್ಧತೆಗಳ ಕುರಿತು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ ಸ್ವಾಗತಿಸಿದರು. ಜಿಲ್ಲಾ ಯೋಜನಾ ವ್ಯವಸ್ಥಾಪಕ ವಿನೋದ ಕಂಠಿ ಸಭೆ ನಿರ್ವಹಿಸಿದರು. ವಿನೋದ ಗಾಮನಗಟ್ಟಿ ವಂದಿಸಿದರು.
ಸಭೆಯಲ್ಲಿ ಎಲ್ಲ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಕೈಗಾರಿಕೆ ಇಲಾಖೆ, ಕಾರ್ಮಿಕ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳು, ತಾರಿಹಾಳ ಮತ್ತು ಬೇಲೂರು ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.



