Friday, February 20, 2026
Google search engine

Homeರಾಜ್ಯಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಅಧಿಕಾರ ತ್ಯಜಿಸಿದರೆ ಮಾತ್ರ ಬದಲಾವಣೆ ಸಾಧ್ಯ : ಕೋಡಿಶ್ರೀ ಭವಿಷ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಅಧಿಕಾರ ತ್ಯಜಿಸಿದರೆ ಮಾತ್ರ ಬದಲಾವಣೆ ಸಾಧ್ಯ : ಕೋಡಿಶ್ರೀ ಭವಿಷ್ಯ

ಬೆಂಗಳೂರು : ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ರಾಜ್ಯ ರಾಜಕೀಯದ ಕುರಿತಂತೆ ಮತ್ತೆ ಭವಿಷ್ಯ ನುಡಿದಿದ್ದು, ಯುಗಾದಿ ನಂತರ ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಸಾಧ್ಯತೆ ಇದೆ ಎಂದಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಶಿ ಹಾಗೂ ಪ್ರಯಾಗರಾಜ್ ಯಾತ್ರೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾದ ಸ್ವಾಮೀಜಿಗಳು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದ ಮಳೆ, ಬೆಳೆ, ರಾಜಕೀಯ ಬೆಳವಣಿಗೆಗಳು ಹಾಗೂ ಜಗತ್ತಿನ ಪರಿಸ್ಥಿತಿಗಳ ಬಗ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜಕೀಯದಲ್ಲಿ ಸಂಕ್ರಾಂತಿ ಹಾಗೂ ಬಜೆಟ್‌ ವರೆಗೂ ಯಾವುದೇ ಅಶಾಂತಿ ಇರುವುದಿಲ್ಲ ಎಂದು ಈ ಹಿಂದೆ ಹೇಳಿದ್ದೆ. ಮುಂದೆಯೂ ದೊಡ್ಡ ಸಮಸ್ಯೆ ಕಾಣಿಸುವುದಿಲ್ಲ. ಆದರೆ ಯುಗಾದಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಅಧಿಕಾರ ತ್ಯಜಿಸಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಸ್ವಾಮೀಜಿಗಳು ಸ್ಪಷ್ಟಪಡಿಸಿದರು.

ಆಡಳಿತ ಪಕ್ಷದ ಒಳರಾಜಕೀಯ ಕುರಿತು ಹಲವು ಊಹಾಪೋಹಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ, ಕೋಡಿಶ್ರೀಗಳ ಮಾತುಗಳಿಗೆ ಮತ್ತಷ್ಟು ಮಹತ್ವ ಲಭಿಸಿದೆ. ಆದರೆ ಅವರು ಯಾವುದೇ ಗೊಂದಲ ಅಥವಾ ಬಿಕ್ಕಟ್ಟು ಉಂಟಾಗುವುದಿಲ್ಲ ಎಂದು ತಿಳಿಸಿದ್ದು, ಶಾಸಕರ ವಿದೇಶ ಪ್ರವಾಸ ಅಥವಾ ಪಕ್ಷದ ಒಳ ಚಟುವಟಿಕೆಗಳಿಂದ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂದರು.

ಡಿಕೆ ಶಿವಕುಮಾರ್ ಹಾಗೂ ಡಾ. ಪರಮೇಶ್ವರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರ ಹೆಸರು ಉಲ್ಲೇಖಿಸಿದ ಸ್ವಾಮೀಜಿಗಳು, ಎಲ್ಲರೂ ಒಳ್ಳೆಯದಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಸರ್ಕಾರ ಸ್ಥಿರವಾಗಿಯೇ ಮುಂದುವರಿಯಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ರಾಜ್ಯದ ಭವಿಷ್ಯದ ಕುರಿತು ಮಾತನಾಡಿದ ಅವರು, ಈ ಬಾರಿ ಕರ್ನಾಟಕಕ್ಕೆ ಉತ್ತಮ ಮಳೆ ಹಾಗೂ ಬೆಳೆಯಾದೀತು ಎಂದು ಭರವಸೆ ನೀಡಿದರು. ರೈತರಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು. ನೀರಿನ ಅಭಾವದ ಭೀತಿ ಇದ್ದರೂ, ರಾಜ್ಯ ಮಟ್ಟದಲ್ಲಿ ದೊಡ್ಡ ಸಂಕಷ್ಟ ಎದುರಾಗುವುದಿಲ್ಲ ಎಂದು ನುಡಿದರು.

ಆದರೆ ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಅಶಾಂತವಾಗಿದೆ ಎಂದು ಎಚ್ಚರಿಸಿದರು. ಕಳೆದ ವರ್ಷಕ್ಕಿಂತ ಈ ವರ್ಷ ಜಗತ್ತಿನಾದ್ಯಂತ ಸಮಸ್ಯೆಗಳು ಹೆಚ್ಚಾಗಲಿವೆ. ನೀರಿನ ಸಮಸ್ಯೆ ಗಂಭೀರವಾಗಲಿದೆ. ಕೆಲ ರಾಷ್ಟ್ರಗಳ ನಡುವೆ ಯುದ್ಧವೂ ಸಂಭವಿಸುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.

ಶಿವರಾತ್ರಿ ಪೂಜೆಯ ಅಂಗವಾಗಿ ಕಾಶಿಗೆ ಭೇಟಿ ನೀಡಿದ್ದಾಗಿ ತಿಳಿಸಿದ ಸ್ವಾಮೀಜಿಗಳು, ಅಲ್ಲಿ ಉತ್ತಮ ದರ್ಶನ ದೊರಕಿದ್ದಾಗಿ ಹೇಳಿದರು. ಪ್ರಯಾಗರಾಜ್‌ ನಲ್ಲಿ ಕೂಡ ಪ್ರಾರ್ಥನೆ ಸಲ್ಲಿಸಿ ಕರ್ನಾಟಕದ ಜನತೆಗೆ ಸುಖಶಾಂತಿ ಹಾಗೂ ಸಮೃದ್ಧಿ ದೊರಕಲಿ ಎಂದು ಬೇಡಿಕೊಂಡಿದ್ದಾಗಿ ತಿಳಿಸಿದರು.

RELATED ARTICLES
- Advertisment -
Google search engine

Most Popular