Thursday, March 5, 2026
Google search engine

Homeರಾಜ್ಯಕೆಎಎಸ್‌ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ : ಕೆಪಿಎಸ್‌ಸಿ ಸ್ಪಷ್ಟನೆ

ಕೆಎಎಸ್‌ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ : ಕೆಪಿಎಸ್‌ಸಿ ಸ್ಪಷ್ಟನೆ

ಬೆಂಗಳೂರು : ಕರ್ನಾಟಕ ಆಡಳಿತ ಸೇವೆ(ಕೆಎಎಸ್‌‍)ಯ ಮುಖ್ಯ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌‍ಸಿ) ಸ್ಪಷ್ಟಪಡಿಸಿದೆ. ಒಂದೇ ಕೊಠಡಿಯಲ್ಲಿ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ ಇದರಲ್ಲಿ ದೊಡ್ಡಮಟ್ಟದ ಆಕ್ರಮ ನಡೆದಿದೆ ಎಂದು ಆರೋಪಿಸಿದ್ದರು.

ತಕ್ಷಣವೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು, ಆರೋಪ ಕುರಿತು ಕೂಡಲೇ ಸಮಗ್ರ ವರದಿ ನೀಡುವಂತೆ ಕೆಪಿಎಸ್‌‍ಸಿ ಕಾರ್ಯದರ್ಶಿ ಜ್ಯೋತಿ ಅವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ಮುಖ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ವರದಿ ಸಲ್ಲಿಸಿರುವ ಕೆಪಿಎಸ್‌‍ಸಿ ಕಾರ್ಯದರ್ಶಿ ಜ್ಯೋತಿ ಅವರು, ಮುಖ್ಯ ಪರೀಕ್ಷೆಯ ವೇಳೆ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆದಿದ್ದು, ಅಭ್ಯರ್ಥಿಗಳು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ಗೊತ್ತಾಗಿದೆ.

ಇನ್ನೂ ಈ ವರದಿಯಲ್ಲಿ ಪ್ರಮುಖವಾಗಿ ಮೂರು ವಿಷಯಗಳನ್ನು ಸ್ಪಷ್ಟಪಡಿಸಿದ್ದು, ಮೊದಲನೆಯದಾಗಿ, ಒಂದೇ ಕೊಠಡಿಯಿಂದ 15 ಜನ ಅಭ್ಯರ್ಥಿಗಳು ಉತ್ತೀರ್ಣ ಆಗಿದ್ದಾರೆ ಎಂಬ ಆರೋಪ ಸತ್ಯವಲ್ಲ ಎಂದು ದೃಡಪಡಿಸಿದ್ದಾರೆ. ಆ ಕೊಠಡಿಯಿಂದ 15 ಜನ ಅಲ್ಲ, 11 ಜನ ಮಾತ್ರ ಉತ್ತೀರ್ಣರಾಗಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಹಲವು ಪ್ರತಿಭಾವಂತ ಅಭ್ಯರ್ಥಿಗಳು ಇದ್ದರೆ ಒಂದೇ ಸ್ಥಳದಿಂದ ಹೆಚ್ಚು ಮಂದಿ ಉತ್ತೀರ್ಣ ಆಗುವುದು ಅಸಾಧಾರಣ ವಿಷಯವಲ್ಲ ಎಂದು ಹೇಳಲಾಗಿದೆ.

ಎರಡನೆಯದಾಗಿ, ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂಬುದನ್ನು ದೃಢಪಡಿಸಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ಅನುಮಾನ ವ್ಯಕ್ತವಾದ ಪರೀಕ್ಷಾ ಕೊಠಡಿಗಳ ದೃಶ್ಯಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗಿದೆ. ಪರೀಕ್ಷೆಯ ವೇಳೆ ಯಾವುದೇ ಅಕ್ರಮ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.

ಮೂರನೆಯದಾಗಿ, ಇದುವರೆಗೆ ಯಾವುದೇ ಅಭ್ಯರ್ಥಿ ಅಥವಾ ವ್ಯಕ್ತಿ ನೇರವಾಗಿ ಕೆಪಿಎಸ್‌‍ ಗೆ ಬಂದು ಅಧಿಕೃತ ದೂರು ಸಲ್ಲಿಸಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಕೇಳಿಬಂದಿದ್ದರೂ, ಅಧಿಕೃತವಾಗಿ ದೂರು ನೀಡಿದವರು ಯಾರೂ ಇಲ್ಲ ಎಂದು ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಕೆಪಿಎಸ್‌‍ಸಿ ವರದಿಯಲ್ಲಿ ಕೆಎಎಸ್‌‍ ಪರೀಕ್ಷೆಯಲ್ಲಿ ಗುರುತರ ಅಕ್ರಮ ನಡೆದಿದೆ ಎಂಬ ಆರೋಪಗಳು ನಿರಾಧಾರ ಎಂದು ಪರೋಕ್ಷವಾಗಿ ವಾದಿಸಲಾಗಿದೆ. ಆದ್ದರಿಂದ ಈ ಹಂತದಲ್ಲಿ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸುವ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯವನ್ನು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಆದರೆ ಅಂತಿಮ ನಿರ್ಧಾರ ರಾಜ್ಯ ಸರ್ಕಾರದ ಕೈಯಲ್ಲಿದ್ದು, ಸರ್ಕಾರ ಈ ವರದಿಯನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ. ಕೆಲವು ಮೂಲಗಳ ಪ್ರಕಾರ, ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳನ್ನು ನಿವಾರಿಸಲು ಸರ್ಕಾರ ಪ್ರತ್ಯೇಕ ತನಿಖಾ ಸಮಿತಿ ರಚಿಸುವ ಸಾಧ್ಯತೆಯೂ ಇದೆ ಎನ್ನಲಾಗಿದ್ದು, ಮತ್ತೊಂದೆಡೆ ಕೆಪಿಎಸ್‌‍ಸಿ ವರದಿಯನ್ನು ಆಧಾರವಾಗಿಸಿಕೊಂಡು ಯಾವುದೇ ಅಕ್ರಮವಾಗಿಲ್ಲ ಎಂದು ಸರ್ಕಾರ ಹೇಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular