ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವತಿಯಿಂದ ಚಿಕ್ಕಬಳ್ಳಾಪುರ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೊಲೀಸ್ ವಸತಿ ಗೃಹ ಸಮುಚ್ಚಯದ ಕಾಮಗಾರಿಯು ಗುಣಮಟ್ಟದಲ್ಲಿ ಹಾಗೂ ತ್ವರಿತವಾಗಿ ಆಗಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಯೋಜನಾ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ “ಪೊಲೀಸ್ ವಸತಿ ಗೃಹ ಸಮುಚ್ಚಯದ ಕಾಮಗಾರಿಗೆ” ಶಂಕುಸ್ಥಾಪನೆ ಕಾರ್ಯ ನೆರವೇರಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ನಗರದಲ್ಲಿ ಪ್ರಥಮ ದರ್ಜೆ ಕಾಲೇಜಿನ ಹಾಗೂ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡಗಳ ಕಾಮಗಾರಿಗಳನ್ನು ತಲಾ 6 ಕೋಟಿ ವೆಚ್ಚದ ದಾಖಲೆಯ ಅವಧಿಯಲ್ಲಿ ಅಂದರೆ ಕೇವಲ 10 ತಿಂಗಳ ಅವಧಿಯಲ್ಲಿ ಗುಣಮಟ್ಟದಲ್ಲಿ ಪೂರ್ಣ ಗೊಳಿಸಲಾಯಿತು.
ಅದೇ ರೀತಿ ಜಿಲ್ಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಕಾಮಗಾರಿಗಳು ವೇಗಗತಿಯಲ್ಲಿ ನಡೆಯುತ್ತಿವೆ. ಅದೇ ರೀತಿ ಈ ವಸತಿ ಸಮುಚ್ಚಯವೂ ನಿಗದಿತ ವೇಳೆಯಲ್ಲಿ ಪೂರ್ಣವಾಗಬೇಕು ಎಂದರಲ್ಲದೆ, ಆ ನಿಟ್ಟಿನಲ್ಲಿ ಯೋಜನಾ ಅಭಿಯಂತರರು ಹಾಗೂ ಗುತ್ತಿಗೆದಾರರು ನಿಗಾವಹಿಸಬೇಕು. ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವತಿಯಿಂದ ನಿರ್ಮಾಣವಾಗುವ ಕಾಮಗಾರಿಗಳಿಗೆ ಅನುದಾನದ ಕೊರತೆ ಆಗುವುದಿಲ್ಲ. ಆದ್ದರಿಂದ ಕಾಮಗಾರಿಯು ಯಾವುದೇ ಕಾರಣಕ್ಕೂ ವಿಳಂಬವಾಗಕೂಡದು.
ಜೊತೆಗೆ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನೂತನವಾಗಿ ನಿರ್ಮಾಣವಾಗುವ ಈ ಕಟ್ಟಡದಲ್ಲಿ ತಂಪು ಹವಾಗುಣ ಕಾಪಾಡುವ ನಿಟ್ಟಿನಲ್ಲಿ ಆದ್ಯತೆ ನೀಡಿ ಕಟ್ಟಡ ನಿರ್ಮಾಣ ಕಾರ್ಯ ಆಗಬೇಕು ಎಂದು ತಿಳಿಸಿದರು.
ಪೊಲೀಸರಿಂದ ಶಾಂತಿ ಸುವ್ಯವಸ್ಥೆ: ಪೊಲೀಸ್ ಇಲಾಖೆ ಸಧೃಡವಾಗಿದ್ದು, ಇಲಾಖೆಯ ಸಿಬ್ಬಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಿದರೆ, ಹೆಚ್ಚು ಕಾರ್ಯಕ್ಷಮತೆಯಿಂದ ಕೆಲಸ ಮಾಡಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಎಲ್ಲ ಸೌಲತ್ತುಗಳನ್ನು ಒದಗಿಸಲು ಇಲಾಖೆಯ ಮುಖ್ಯಸ್ಥರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನಾಥ್ ರೈ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಶೀಲ್ದಾರ್ ರಶ್ಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.



