ಬೆಂಗಳೂರು : ರಾಜ್ಯ ಸರ್ಕಾರವು ಕರ್ನಾಟಕ ಹಣಕಾಸಿನ ಜವಾಬ್ದಾರಿ ಕಾಯ್ದೆ(ಕೆಎಫ್‌ಆರ್‌ಎ) ಅಡಿಯಲ್ಲಿ ಸ್ಥಾಪಿತವಾದ ಹಣಕಾಸಿನ ಶಿಸ್ತಿನ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಒಟ್ಟು ಸಾಲಗಳು ಈಗ ಒಟ್ಟು ರಾಜ್ಯ ದೇಶೀಯ ಉತ್ಪನ್ನದ ನಿರ್ಣಾಯಕ ಶೇ.25ರಷ್ಟು ಮಿತಿಯನ್ನು ಮೀರಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಸರ್ಕಾರ ಸಾಲದ ಹೊರೆಯ ನಿಜವಾದ ಪ್ರಮಾಣವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದೆ. ಅತಿಯಾದ ಖರ್ಚುಗಳು, ಅರ್ಥವಿಲ್ಲದ ವೆಚ್ಚಗಳು ಹೆಚ್ಚುತ್ತಿರುವ ಸಾಲಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ. ಅಂದಾಜು ಪ್ರಕಾರ 8 ಲಕ್ಷ ಕೋಟಿ ರೂ. ಒಟ್ಟು ಸಾಲದಲ್ಲಿ 5 ಲಕ್ಷ ಕೋಟಿ ರೂ. ಸಿದ್ದರಾಮಯ್ಯ ಆಡಳಿತದಲ್ಲಿ ಜಮಾ ಆಗಿದ್ದು, ಭವಿಷ್ಯದ ಯಾವುದೇ ಆಡಳಿತಕ್ಕೆ ರಾಜ್ಯದ ಹಣಕಾಸು ಸರಿಹೊಂದಿಸುವುದು ದೊಡ್ಡ ಸವಾಲಾಗಬಹುದು ಎಂದಿದ್ದಾರೆ.
ಬಳಿಕ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಈ ಬಾರಿಯ ಬಜೆಟ್ ಹಣಕಾಸಿನ ಕೊರತೆಯ ಮಿತಿಗಳನ್ನು ಉಲ್ಲಂಘಿಸಲಿದೆ, ಇದು GSDP ಅಂಕಿಅಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆರೋಪಿಸಿದರಲ್ಲದೆ, ಹಣಕಾಸಿನ ಕೊರತೆ ಶೇ.25ರ ಒಳಗೆ ಇರಬೇಕು. ಆದರೆ, ರಾಜ್ಯವು ಆ ಮಿತಿಯನ್ನು ದಾಟುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಇಂದು 17ನೇ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಇದರ ಬೆನ್ನಲ್ಲೇ ವಿಪಕ್ಷಗಳು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಬಜೆಟ್ ಸುಮಾರು 4 ಲಕ್ಷ ಕೋಟಿ ರೂ. ಮೀರುವ ಸಾಧ್ಯತೆಗಳಿದ್ದು, ಈ ಬಾರಿಯ ಬಜೆಟ್ ಕಲ್ಯಾಣ, ಮೂಲಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳ ಮೇಲೆ ಕೇಂದ್ರಿತವಾಗಿರಲಿದೆ ಎಂದು ಹೇಳಲಾಗುತ್ತಿದೆ.



