ಮೈಸೂರು : ಬಡವರು, ನೊಂದವರಿಗೆ ನ್ಯಾಯ ಒದಗಿಸುವುದು ವಕೀಲರ ವೃತ್ತಿ ಧರ್ಮ. ಕಕ್ಷಿದಾರರಿಗೆ ನ್ಯಾಯ ದೊರೆತು ಸಂತಸ ಭಾವ ಮೂಡಿಸಿದರೆ ವೃತ್ತಿ ಬದುಕು ಸಾರ್ಥಕವಾಗುತ್ತದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ರಾಮ ಸುಬ್ರಮಣಿಯನ್ ಹೇಳಿದರು.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಕಾನೂನು ವಿಶ್ವವಿದ್ಯಾಲಯವು ಆಯೋಜಿಸಿದ್ದ ತರಗತಿಯಿಂದ ನ್ಯಾಯಾಲಯದ ಕೊಠಡಿಗೆ-ಸಾಮಾಜಿಕ ನ್ಯಾಯದ ಪ್ರವರ್ತಕರಾಗಿ ಕಾನೂನು ವಿದ್ಯಾರ್ಥಿಗಳು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಹಣ ಗಳಿಕೆ ಆತ್ಮತೃಪ್ತಿಯನ್ನು ಪ್ರಾಮಾಣಿಕ ವಕೀಲನಿಗೆ ದೊರಕಿಸುವುದಿಲ್ಲ. ಕಕ್ಷಿದಾರನಿಗೆ ನ್ಯಾಯ ಸಿಕ್ಕಾಗ, ನೆಮ್ಮದಿಯ ನಿಟ್ಟುಸಿರು ಬಿಟ್ಟಾಗ ಮೂಡುವ ಭಾವದಲ್ಲಿ ಸಾರ್ಥಕತೆ ಸಿಗುತ್ತದೆ. ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆಯ ಜೊತೆಗೆ ಅಂತಃಕರಣ ಹಾಗೂ ಸೇವಾ ಮನೋಭಾವ ಇರಬೇಕು. ಬಡವರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಬಳಿಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಮಾತನಾಡಿ, ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ 13 ಕಾನೂನು ಕಾಲೇಜುಗಳ ಸಹಯೋಗದಲ್ಲಿ 29 ಗ್ರಾಮಗಳಲ್ಲಿ ಕಾನೂನು ಸೇವಾ ಕ್ಲಿನಿಕ್ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಬಡವರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ಕಾನೂನು ಉಚಿತ ಸಲಹೆ ನೀಡಲಾಗುತ್ತದೆ. ನ್ಯಾಯಾಲಯದ ಹೊರಗೆ ಸಂಧಾನ-ಪರಿಹಾರ, ಕಾನೂನು ಸಾಕ್ಷರತೆ, ಜಾಗೃತಿ ಶಿಬಿರ ನಡೆಸಲಾಗುತ್ತದೆ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾತನಾಡಿ, ಸಕಾಲದಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ದೊರೆಯಬೇಕು. ರಾಜ್ಯದಲ್ಲಿ 155 ಕಾನೂನು ಕಾಲೇಜುಗಳಿದ್ದು, ಅವುಗಳ ಸಹಯೋಗದಲ್ಲಿ ಕಾನೂನು ಅರಿವು ಮೂಡಿಸಲು ಪ್ರಾಧಿಕಾರವು ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಉಷಾರಾಣಿ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು, ಸಿವಿಲ್ ನ್ಯಾಯಾಧೀಶ ಕೆ.ಕೆ.ಅಮರನಾಥ್, ವಕೀಲ ಶ್ರೀಧರ್ ಪ್ರಭು ಪಾಲ್ಗೊಂಡಿದ್ದರು.



