ಮಂಗಳೂರು (ದಕ್ಷಿಣ ಕನ್ನಡ): ಆರೆಸ್ಸೆಸ್ ತನ್ನ ಶಿಕ್ಷಣದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಸಂಸ್ಕಾರಭರಿತ ಭಾಷೆ ಮತ್ತು ಸಮುದಾಯದ ಬಗ್ಗೆ ಗೌರವ ಭಾವನೆಗೆ ಪ್ರೇರಕವಾದ ನೀತಿಗಳನ್ನು ರೂಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ಮುಸ್ಲಿಮ್ ಬಾಂಧವ್ಯ ವೇದಿಕೆ ಆರೆಸ್ಸೆಸ್ ಸಹ ಸಂಘ ಚಾಲಕ ಮೋಹನ್ ಭಾಗವತ್‌ರಿಗೆ ಪತ್ರ ವ್ಯವಹಾರಕ್ಕೆ ಮುಂದಾಗಿದೆ. ಈ ಕುರಿತು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ ವೇದಿಕೆಯ ಅಧ್ಯಕ್ಷ ಅನೀಶ್ ಪಾಷಾ, ಆರೆಸ್ಸೆಸ್‌ನಿಂದ ಶಿಕ್ಷಣ ಪಡೆದ ಬಹಳಷ್ಟು ಮಂದಿ ಮುಸ್ಲಿಮರ ವಿರುದ್ದ ನಿರಂತರ ಅಪ್ರಬುದ್ದತೆಯಿಂದ ಕೂಡಿದ, ಅವಹೇಳನಕಾರಿಯಾಗಿ, ಅಗೌರವದ ಭಾಷೆಯಲ್ಲಿ ಮಾತನಾಡುವುದು ಬಹಳ ಹಿಂದಿನಿಂದಲೂ ಗಮನಿಸುತ್ತಿದ್ದೇವೆ.
ಸಮುದಾಯದ ಬಗ್ಗೆ ಈ ರೀತಿಯ ದ್ವೇಷ ಮನೋಭಾವ ಯಾಕಾಗಿ ಎಂದು ತಿಳಿಯುವ ನಿಟ್ಟಿನಲ್ಲಿ ಸಂಘದ ಸಹ ಸಂಚಾಲಕರ ಜೊತೆ ವೇದಿಕೆ ಪತಿನಿಧಿಗಳು ಮಾತುಕತೆ ನಡೆಸಿದ್ದೇವೆ. ತಪ್ಪು ಕಲ್ಪನೆ ನಿವಾರಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ಪ್ರಮುಖರ ಜೊತೆ ಚರ್ಚೆಗೆ ಆಗ್ರಹಿಸಲಾಗಿದೆ. ಆದರೆ ಪೂರಕ ಸ್ಪಂದನೆ ದೊರಕದ ಕಾರಣ ಇದೀಗ ಪತ್ರದ ಮೂಲಕ ನಮ್ಮ ಅನಿಸಿಕೆ ತಿಳಿಸಲು ಮುಂದಾಗಿದ್ದೇವೆ ಎಂದರು.
ಇನ್ನು ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಹೆನ್ನಾಬೈಲ್ ಮಾತನಾಡಿ, ಆರೆಸ್ಸೆಸ್‌ನಲ್ಲಿ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದೆ ಮತ್ತು ಅಲ್ಲಿಂದಲೇ ಶಿಕ್ಷಣವನ್ನು ಪಡೆದ ಮಾಜಿ ಪ್ರಾಂತ್ಯ ಕಾರ್ಯವಾಹಕ ಕಲ್ಲಡ್ಕ ಪ್ರಭಾಕರ್ ಭಟ್ ಎಂಬವರು ಇತ್ತೀಚೆಗೆ ಮುಸ್ಲಿಮ್ ಮಹಿಳೆಯರ ಬಗ್ಗೆ ಬಳಸಿದ ಅವಹೇಳನಕಾರಿ ಭಾಷೆಯನ್ನು ಇಡೀ ದೇಶ ನೋಡಿದೆ. ಮುಸ್ಲಿಮರ ಪ್ರಾರ್ಥನಾ ಗೃಹಗಳನ್ನು ಕೆಡಹುವ, ಅತಿಹೆಚ್ಚು ಬೆದರಿಕೆಗಳನ್ನು ಭಾರತದಲ್ಲಿ ನೀಡುವುದು ಆರೆಸ್ಸೆಸ್‌ನಿಂದ ಶಿಕ್ಷಣ ಪಡೆದವರೇ ಆಗಿದ್ದಾರೆ. ಅರ್ಹತೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಮುಸ್ಲಿಮರಿಗೆ ಸಿಗಬೇಕಾದ ರಾಜಕೀಯ-ಸಾಮಾಜಿಕ ಸ್ಥಾನಮಾನಗಳು ಕನಿಷ್ಠ ಪ್ರಮಾಣದಲ್ಲೂ ದಕ್ಕಿಲ್ಲ ಅಂದರು.