ಹಾಸನ : ನಗರದಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಗಾಂಜಾ ನಶೆ, ಎಣ್ಣೆ ಮತ್ತಲ್ಲಿ ದುರ್ವರ್ತನೆ ತೋರುತ್ತಿರುವ ಕಿಡಿಗೇಡಿಗಳ ಅಟ್ಟಹಾಸ ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿವೆ. ಸೋಮವಾರದಂದು ಎರಡು ಮನೆ ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದವರನ್ನು ಬಂಧಿಸಲು ಪೊಲೀಸರು ಮುಂದಾದ ಬೆನ್ನಲ್ಲೇ ಮತ್ತೊಂದು ಭಯಾನಕ ಘಟನೆ ಹಾಸನದ ಜನತೆಯನ್ನ ಬೆಚ್ಚಿ ಬೀಳೀಸಿದೆ. ಶಾಲೆಯಿಂದ ಮನೆಗೆ ಹೊರಟಿದ್ದ ಬಾಲಕಿಯನ್ನ ಓರ್ವ ಕಿಡಿಗೇಡಿ ಹಿಂಬಾಲಿಸಿ ಕೊಂಡು ಬಂದು ಆತಂಕ ಸೃಷ್ಟಿಸಿದ್ದಾನೆ. ಅಷ್ಟರಲ್ಲಿ ಬಾಲಕಿ ಓಡಿ ಮನೆ ಒಳಗೆ ಸೇರಿಕೊಂಡು ಅಮ್ಮಾ ಎಂದು ಕಿರುಚುತ್ತಿದ್ದಂತೆ ಆಸಾಮಿ ಪರಾರಿಯಾಗಿದ್ದಾನೆ.
ಜನವರಿ 17ರಂದು ಹಾಸನದ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯ 80 ಅಡಿ ರಸ್ತೆ ಪ್ರದೇಶದ ಮನೆಯೊಂದರ ಬಳಿ ನಡೆದಿರುವ ಘಟನೆಯೊಂದು ಹೆಣ್ಣು ಮಕ್ಕಳಿರುವ ಪೋಷಕರು ಬೆಚ್ಚಿಬೀಳುವಂತೆ ಮಾಡಿದೆ. ಶನಿವಾರದಂದು ಕ್ಲಾಸ್ ಮುಗಿಸಿ ಬಸ್ನಲ್ಲಿ ಮನೆಯತ್ತ ಬಂದ 9ನೇ ತರಗತಿ ಬಾಲಕಿ ಇನ್ನೇನು ಮನೆ ತಲುಪಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ ಹಿಂಬಾಲಿಸುತ್ತಿರುವುದು ಗೊತ್ತಾಗಿದೆ. ಸುತ್ತಮುತ್ತ ಯಾರು ಇಲ್ಲದ ಕಾರಣ ಆತಂಕದಿಂದ ಇನ್ನೇನು ಮನೆ ಬಂತಲ್ಲಾ ಎಂದು ಗೇಟ್ ತೆಗೆದು ಒಳ ಸೇರಿಕೊಂಡ್ರು ಹಿಂಬಾಲಿಸುವುದು ಬಿಡದ ವ್ಯಕ್ತಿ ಗೇಟ್ನಿಂದ ಇಣುಕಿದ್ದಾನೆ. ಗಾಬರಿಗೊಂಡ ಬಾಲಕಿ ಅಮ್ಮಾ ಅಮ್ಮಾ ಬಾಗಿಲು ತೆಗೆಯಮ್ಮಾ ಎಂದು ಕೂಗಾಡಿದ್ದಾಳೆ.

ಮನೆಯೊಳಗೆ ಯಾರೋ ಇದಾರೆ, ಅವರು ಹೊರ ಬಂದ್ರೆ ಸಿಕ್ಕಿ ಬೀಳ್ತಿನಿ ಎಂದು ಬೆಚ್ಚಿದ ವ್ಯಕ್ತಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಘಟನೆಯ ಸಂಪೂರ್ಣ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಬಾಲಕಿಯ ಚೀರಾಟ ಅಪರಿಚಿತನ ಎದೆ ನಡುಗಿಸಿದೆ. ಒಂಟಿಯಾಗಿ ಓಡಾಡುವ ಮಕ್ಕಳಿಗೆ ಸುರಕ್ಷತೆ ಇಲ್ಲ. ಪಕ್ಕದಲ್ಲಿ ಬಾರ್ ಇದೆ, ಅಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಸೂಕ್ತ ಭದ್ರತೆ ನೀಡುವಂತೆ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಹೊಸ ಮನೆ ಕಟ್ಟಿ ಅಲ್ಲೇ ವಾಸವಾಗಿರುವ ಕುಟುಂಬ, ಸುರಕ್ಷತೆ ಕಾರಣದಿಂದ ಮನೆಯ ಸುತ್ತಲು ಸಿಸಿ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಶಾಲೆಯಿಂದ ಮನೆಯತ್ತ ಹೊರಟಿದ್ದ ಬಾಲಕಿ ಶಾಲಾ ಬಸ್ನಲ್ಲಿ ಬಂದಿದ್ದಾಳೆ. ಆದರೆ ಶಾಲೆ ಇಡೀ ದಿನ ಇರಬಹುದು ಎಂದು ಭಾವಿಸಿದ್ದ ಕುಟುಂಬ ಶಾಲೆಯಿಂದ ಮೆಸೇಜ್ ನೋಡಿ ಆಕೆಯನ್ನ ಕರೆತರಲು ಅಮ್ಮ ಹಾಗೂ ಅಜ್ಜಿ ಆಟೋ ಏರಿ ಶಾಲೆಯತ್ತ ಹೋಗಿದ್ದಾರೆ. ಆದರೆ ಪೋಷಕರು ಅತ್ತ ಹೊರಟ ವೇಳೆ ಬಾಲಕಿ ಇತ್ತ ಶಾಲಾ ಬಸ್ನಲ್ಲಿ ಮನೆಗೆ ಮರಳಿದ್ದಾಳೆ.
ತಲೆಗೆ ಕೆಂಪು ಟೋಪಿ ಹಾಕಿರುವ ವ್ಯಕ್ತಿಯೋರ್ವ, ಒಂಟಿಯಾಗಿ ಬರುತ್ತಿದ್ದ ಬಾಲಕಿಯನ್ನ ಬೆನ್ನಟ್ಟಿದ್ದಾನೆ. ಇವನ ವರ್ತನೆ ನೋಡಿದರೆ ನಿಜಕ್ಕೂ ಬೆಚ್ಚಿಬೀಳಿಸುತ್ತದೆ. ಒಂದು ವೇಳೆ ಬಾಲಕಿ ಹೆದರಿದ್ದರೆ ಗತಿ ಏನೆಂದು ಆತಂಕ ವ್ಯಕ್ತಪಡಿಸಿರುವ ಕುಟುಂಬ ಸದಸ್ಯರು, ನಾವು ಮನೆಯೊಳಗೆ ಇದ್ದೇವೆ ಎಂದು ಆತ ಹೆದರಿ ಹೊಗಿದ್ದಾನೆ. ನಮ್ಮ ಮಗಳು ಒಳಗೆ ಬಂದು ಗೇಟ್ ಲಾಕ್ ಮಾಡಿ ಮನೆಯ ಮುಖ್ಯದ್ವಾರದ ಬಳಿ ಇರುವ ಇನ್ನೊಂದು ಕಬ್ಬಿಣದ ಬಾಗಿಲಿನೊಳಗೆ ಸೇರಿಕೊಂಡು ರಕ್ಷಣೆಗಾಗಿ ಪರದಾಡಿದ್ದಾಳೆ.
ವ್ಯಕ್ತಿಯ ನೀಚತನದಿಂದ ಆಘಾತಗೊಂಡ ಬಾಲಕಿಗೆ ದಿಢೀರ್ ಜ್ವರ ಬಂದು ಎರಡು ದಿನ ನರಳಾಡಿದ್ದಾಳೆ. ಇನ್ನು ಘಟನೆ ಬಗ್ಗೆ ಮನೆಯವರು ಕೂಡಲೇ ಪೆನ್ಚನ್ ಮೊಹಲ್ಲಾ ಪೊಲೀಸರಿಗೆ ತಿಳಿಸಿದ್ದು, ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಗಾಂಜಾ ಮತ್ತಿನಲ್ಲಿ ಓಡಾಡುವವರ ಹಾವಳಿ ಹೆಚ್ಚಾಗಿದೆ, ಒಂಟಿ ಮಹಿಳೆಯರು ಓಡಾಡುವಂತಿಲ್ಲ. ಪುಂಡಾಟ ಮೆರೆಯುತ್ತಾರೆ, ಇದಕ್ಕೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಲಾಗಿದೆ.
ಒಟ್ಟಿನಲ್ಲಿ ಹಾಸನದ ಜನರೇ ಹೇಳುವಂತೆ ನಗರದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ, ಅಮಲೇರಿಸಿಕೊಂಡು ಬೇಕಾಬಿಟ್ಟಿಯಾಗಿ ಓಡಾಡುತ್ತಾ ಭೀತಿ ಹುಟ್ಟಿಸುವ ಪುಂಡರ ಹಾವಳಿಯೂ ಮಿತಿ ಮೀರುತ್ತಿದೆ. ಮಕ್ಕಳು ಶಾಲೆಗೆ ಬಸ್ನಲ್ಲಿ ಹೋಗಿ ವಾಪಸ್ ಆಗುತ್ತಾರೆ ಎಂದು ನೆಮ್ಮದಿಯಿಂದ ಇರುತ್ತಿದ್ದ ಪೋಷಕರಿಗೆ ಈ ಘಟನೆ ಎದೆ ನಡುಗುವಂತೆ ಮಾಡಿದೆ. ಸದ್ಯ ಜನರ ಆತಂಕಕ್ಕೆ ಕಾರಣವಾಗುತ್ತಿರುವ ಇಂತಹ ಪುಂಡರ ಹೆಡೆಮುರಿ ಕಟ್ಟುವ ಕೆಲಸ ಪೊಲೀಸರು ಮಾಡಬೇಕಿದೆ.



