ಮದ್ದೂರು: ಪಶು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಇರುವ ಸಿಬ್ಬಂದಿಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ರೈತರಿಗೆ ಸಕಾಲಕ್ಕೆ ಅಧಿಕಾರಿಗಳು ಸೇವೆಯನ್ನು ನೀಡುತ್ತಿದ್ದಾರೆ. ಮುಂದೆ ನಡೆಯುವ ಸದನದ ಗಮನ ಸೆಳೆದು ಪಶು ಇಲಾಖೆಗೆ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.
ತಾಲೂಕಿನ ಆಲೂರು ದೊಡ್ಡಿ ಗ್ರಾಮದಲ್ಲಿ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 34 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಮತ್ತು ಪಶು ಚಿಕಿತ್ಸಾ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ, ಇಲಾಖೆ ಅಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ನಂತರ ಅವರು ಮಾತನಾಡಿದರು.
ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೇವನ್ನು ಬೆಳೆಯುವ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು. ಪಶುಪಾಲನ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಮದ್ದೂರು ತಾಲೂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಮೂರು ನಾಲ್ಕು ಕಡೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒತ್ತಡದ ನಡುವೆಯೂ ರೈತರಿಗೆ ಪಶುಪಾಲನಾಗಿ ಉತ್ತಮ ಸೇವೆ ನೀಡುತ್ತಿದೆ. ಆಲೂರು ದೊಡ್ಡಿ ಗ್ರಾಮದಲ್ಲಿ ಸ್ಮಶಾನಕ್ಕೂ ಸ್ಥಳದ ಸಮಸ್ಯೆ ಇದೆ. ನೂತನ ಪಶು ಆಸ್ಪತ್ರೆಯ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ನನ್ನ ಅನುದಾನವನ್ನು ನೀಡುತ್ತೇನೆ. ಗ್ರಾಮದಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಮಾಡುವಂತೆ ಮನವಿ ಸಲ್ಲಿಸಿದ್ದು, ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ತೆರೆಯಲು ಚಿಂತಿಸಲಾಗುವುದು. ಗ್ರಾಮದಲ್ಲಿ ರಾಜಕೀಯ, ಗುಂಪುಗಾರಿಕೆ ಮಾಡುವುದರಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದು ಗ್ರಾಮದ ಪ್ರಗತಿಗೆ ಶ್ರಮಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ತಾಯಮ್ಮ, ಉಪಾಧ್ಯಕ್ಷ ನಾಗೇಶಚಾರಿ, ಸದಸ್ಯರಾದ ಎಸ್. ಉದಯಶಂಕರ್, ವರುಣಾ ಕುಮಾರಿ, ಮಂಜುಳಾ, ಪಶುಪಾಲನ ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ಸಿ. ಸುರೇಶ್, ನಿವೃತ್ತ ಜಂಟಿ ನಿರ್ದೇಶಕ ಡಾ. ಎಲ್. ಪ್ರಕಾಶ್, ಮುಖ್ಯ ಪಶು ವೈದ್ಯಧಿಕಾರಿ ಡಾ.ಬಿ.ಬಿ. ಪ್ರವೀಣ್ ಕುಮಾರ್, ಸೇರಿದಂತೆ ಇತರರಿದ್ದರು.