ಚಿಕ್ಕಮಗಳೂರು : ಇತ್ತೀಚೆಗೆ ಹಲವು ಶಾಲಾ ಕಾಲೇಜುಗಳಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬರುವ ಮಕ್ಕಳನ್ನು ಶಿಕ್ಷಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಚಿಕ್ಕಮಗಳೂರಿನ MES ಪಿಯು ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ತರಗತಿಗೆ ಬಂದಿದ್ದಕ್ಕೆ ಪ್ರಿನ್ಸಿಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಮತ್ತೊಮ್ಮೆ ಜಿಲ್ಲೆಯಲ್ಲಿ ಇದೇ ವಿಚಾರವಾಗಿ ಗಲಾಟೆಯಾಗಿದ್ದು, ನಗರದ ಶಾಲೆಯೊಂದರಲ್ಲಿ ಅಯ್ಯಪ್ಪ ಮಾಲೆ ಹಾಕಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ನಗರದ ಸಂತ ಜೋಸೆಫ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಯನ್ನು ಶಿಕ್ಷಕರು ಹೊಡೆದು ಶಾಲೆಯಿಂದ ಹೊರ ಕಳಿಸಿದ್ದಾರೆ ಎಂದು ಮಕ್ಕಳು ಮತ್ತು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಯ ವಿರುದ್ಧ ಭಜರಂಗದಳ ಕಾರ್ಯಕರ್ತರು ಹಾಗೂ ನೂರಾರು ಅಯ್ಯಪ್ಪ ಮಾಲಾಧಾರಿಗಳು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಶಾಲಾ ಆಡಳಿತ ಮಂಡಳಿ ಅಯ್ಯಪ್ಪ ಮಾಲಾಧಾರಿಗಳ ಬಳಿ ಕ್ಷಮೆ ಯಾಚಿಸಿ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಿಸೆಂಬರ್ 1 ರಂದು ಚಿಕ್ಕಮಗಳೂರಿನ MES ಪಿಯು ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ತರಗತಿಗೆ ಬಂದಿದ್ದಕ್ಕೆ ಪ್ರಿನ್ಸಿಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಅಯ್ಯಪ್ಪ ಮಾಲೆ ತೆಗೆದು ಬರುವಂತೆ ಸೂಚನೆ ನೀಡಿ ಹೊರಗೆ ಕಳುಹಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿದಂತೆ ನೂರಾರು ಹಿಂದೂ ಸಂಘಟನೆಗಳ ಮುಖಂಡರು, ಕಾಲೇಜು ಬಳಿ ಬಂದು ಕಾಲೇಜ್ ಅಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಯ್ಯಪ್ಪ ಮೂಲಾಧಾರಿಗಳನ್ನ ಹೊರ ಕಳಿಸಿದ್ರೆ ನೂರಾರು ವಿದ್ಯಾರ್ಥಿಗಳಿಗೆ ಮಾಲೆ ಹಾಕಿಸುವ ಎಚ್ಚರಿಕೆ ನೀಡಿದ್ದರು.
ಅಷ್ಟೇ ಅಲ್ಲದೇ ಬುಧವಾರ (ಡಿ.17) ಅಯ್ಯಪ್ಪ ಮಾಲೆ ಧರಿಸಿದ್ದ ಹಿನ್ನೆಲೆಯಲ್ಲಿ ಆರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯಿಂದ ವಾಪಾಸ್ ಕಳುಹಿಸಲಾಗಿದೆ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ಭಾಗ್ಯ ವಿರುದ್ಧ ಆರೋಪ ಕೇಳಿಬಂದಿತ್ತು. ಆದರೆ ಆರೋಪಗಳನ್ನು ತಳ್ಳಿಹಾಕಿರುವ ಮುಖ್ಯ ಶಿಕ್ಷಕಿ , ನಾನು ಯಾವುದೇ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಗೆ ಕಳುಹಿಸಿಲ್ಲ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಚಿಕ್ಕಮಗಳೂರಿನಲ್ಲಿ ಶಿಕ್ಷಕ ಮಾಲೆ ಧರಿಸಿದ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.



