ರಾಮನಗರ: ಲೋಕಸಭಾ ಸಾರ್ವತ್ರಿಕ ಚುನಾವಣಾ ೨೦೨೪ರ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗದಿಂದ ಈಗಾಗಲೇ ಹೊರಡಿಸಲಾಗಿದ್ದು, ಅದರಂತೆ ಮನೆಯಿಂದಲೇ ಮತದಾನ ಮಾಡಲು ಇಚ್ಛಿಸುವ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಕೋವಿಡ್ ಸೋಂಕಿತರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಬಿನೋಯ್ ಅವರು ತಿಳಿಸಿದರು.
ಅವರು ಇಂದು ನಗರದ ತಾಲ್ಲೂಕು ಆಡಳಿತ ಸೌಧದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಇಬ್ಬರು ಮತಗಟ್ಟೆ ಅಧಿಕಾರಿಗಳು, ಒಬ್ಬರು ಮೈಕ್ರೋ ವೀಕ್ಷಕರು, ಪೊಲೀಸ್ ಅಧಿಕಾರಿಗಳು ಹಾಗೂ ಡಿಡಿಒಗಳನ್ನು ಒಳಗೊಂಡಂತೆ ಒಟ್ಟು ೧೩ ತಂಡಗಳನ್ನು ರಚಿಸಲಾಗಿದೆ. ಮನೆಯಿಂದಲೇ ಮತದಾನ ಮಾಡಲು ಇಚ್ಛಿಸುವ ಮತದಾರರ ಮನೆಗೆ ತೆರಳಲು ಈಗಾಗಲೇ ರೂಟ್ ಮ್ಯಾಪ್ ಹಾಕಿಕೊಳ್ಳಲಾಗಿದೆ ಎಂದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಇದೇ ಏ. ೧೩ ರಿಂದ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಮತದಾರರ ಮನೆ ಬಾಗಿಲಿಗೆ ತೆರಳಲು ಒಂದು ದಿನ ಮುಂಚಿತವಾಗಿ ಸೆಕ್ಟರ್ ಅಧಿಕಾರಿ ಹಾಗೂ ಬಿಎಲ್‌ಓಗಳ ಮುಖಾಂತರ ಮತದಾರರಿಗೆ ಮಾಹಿತಿಯನ್ನು ರವಾನಿಸಲಾಗುವುದು. ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಇಚ್ಛಿಸಿದ್ದಲ್ಲಿ ಅವರಿಗೂ ಸಹ ಮತದಾನ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ ತೇಜಸ್ವಿನಿ ಉಪಸ್ಥಿತರಿದ್ದರು.