ವರದಿ :ಸ್ಟೀಫನ್ ಜೇಮ್ಸ್
ಬೆಳಗಾವಿ, : ಮಾಜಿ ಸಂಸದ ರಮೇಶ್ ಕತ್ತಿ ಅವರು ವಾಲ್ಮೀಕಿ ಸಮುದಾಯದ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಸಮಾಜದ ಮುಖಂಡ ರಾಜಶೇಖರ ತಳವಾರ್ ಅವರ ನೀಡಿದ ದೂರಿನ ಮೇರೆಗೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ(ಅಟ್ರಾಸಿಟಿ) ಕೇಸ್ ದಾಖಲಾಗಿದೆ. ಆದರೂ ಸಹ ನಾಳೆ ರಾಜ್ಯಾದ್ಯಂತ ಹೋರಾಟಕ್ಕೆ ವಾಲ್ಮೀಕಿ ಸಮಾಜ ಕರೆ ನೀಡಿದೆ. ಇದರ ಬೆನ್ನಲ್ಲೇ ರಮೇಶ್ ಕತ್ತಿ ವಿಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿರೋಧಿಗಳು ನನ್ನ ಹೇಳಿಕೆಯನ್ನ ತಿರುಚಿದ್ದಾರೆ. ಯಾರಿಗಯಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸ್ಪಷ್ಟನೆ ನೀಡಿದ ರಮೇಶ್ ಕತ್ತಿ
ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದು, ನನ್ನ ಹೇಳಿಕೆಯನ್ನ ತಿರುಚಲಾಗಿದೆ. ಡಾಲ್ಬಿ ಹಚ್ಚಲು ಅಭಿಮಾನಿಗಳು ಒತ್ತಾಯಿಸಿದಾಗ ನಾನು ಬ್ಯಾಡರೋ (ಬೇಡ) ಎಂದಿದ್ದೆ. ಆದರೆ, ನನ್ನ ಹೇಳಿಕೆಯನ್ನ ನನ್ನ ಗೆಲುವು ಸಹಿಸಲಾಗದ ವಿರೋಧಿಗಳಿಂದ ತಿರುಚಲಾಗಿದೆ. ಇದರಿಂದ ಯಾರಿಗಯಾದರೂ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಈ ಪ್ರಕರಣ ಸಂಬಂಧ ವಾಲ್ಮೀಕಿ ಸಮುದಾಯದವರು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯ ಹೋರಾಟಕ್ಕೆ ಕರೆ ನೀಡಿದೆ. ವಾಲ್ಮೀಕಿ ಸಮಾಜದ ನಾಯಕರು, ನಾಳೆ ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.



