ವಿಜಯಪುರ : ಅರಣ್ಯ ರಕ್ಷಿಸಬೇಕಾದ ರಕ್ಷಕರಿಂದಲೇ ಮರಗಳ್ಳತನಕ್ಕೆ ಯತ್ನಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದು, ಮೇಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ವಿಜಯಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಮಂಡಿಬಲೆ ಅರಣ್ಯ ಇಲಾಖೆಗೆ ಸೇರಿರುವ ನೂರಾರು ಎಕರೆ ಪ್ರದೇಶದಲ್ಲಿ ನೀಲಗಿರಿ, ಬೇವು, ಅಕೇಶಿಯಾ ಸೇರಿದಂತೆ ನಾನಾ ಬಗೆಯ ಮರಗಳು ದಟ್ಟವಾಗಿ ಬೆಳೆದು ನಿಂತಿದ್ದು, ಅರಣ್ಯ ಪ್ರದೇಶ ಮುಖ್ಯದ್ವಾರದಲ್ಲಿ ಅರಣ್ಯ ಇಲಾಖೆಯ ರಕ್ಷಕರಿಗೆ, ಕಚೇರಿ ಅಧಿಕಾರಿಗಳು ಸಭೆ ನಡೆಸಲು, ತಂಗಲು ಕಟ್ಟಡವನ್ನು ನಿರ್ಮಿಸಲಾಗಿದೆ. ಮಂಗಳವಾರ ರಾತ್ರಿ ಇಲ್ಲಿನ ಸಿಬ್ಬಂದಿಯೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳಿಂದ ಮರ ಕಟಾವು ಮಾಡಿಸಿ, ಮಾರಾಟದಿಂದ ಬಂದ ಹಣದಲ್ಲಿ ಹಂಚಿಕೊಳ್ಳಲು ಸಲುವಾಗಿ ಮರಗಳನ್ನು ಕಡಿಸಲಾಗಿದೆ ಎನ್ನಲಾಗಿದೆ.
ಅಲ್ಲದೆ ಸುಮಾರು ನೂರಕ್ಕೂ ಹೆಚ್ಚು ನೀಲಗಿರಿ ಸೇರಿದಂತೆ ಇತರೆ ಮರಗಳನ್ನು ಕಡಿದು ವಾಹನಕ್ಕೆ ತುಂಬಿ ಸಾಗಟ ಮಾಡುತ್ತಿದ್ದ ಸಮಯಕ್ಕೆ ಅರಣ್ಯ ಇಲಾಖೆಯ ಆರ್ ಎಫ್ ಓ ಗೆ ಮಾಹಿತಿ ತಲುಪಿದೆ. ಕೂಡಲೇ ಆರ್ ಎಫ್ ಓ ನಾರ್ಗರ್ಜುನ್ ಅವರೊಂದಿಗೆ ತಂಡ ಕಾರ್ಯಾಚರಣೆಗೆ ಇಳಿದಿದೆ. ಈ ವೇಳೆ ಮರ ಕಡಿದು ವಾಹನಕ್ಕೆ ಲೋಡು ಮಾಡುತ್ತಿದ್ದ ವೇಳೆಗೆ ಸ್ಥಳಕ್ಕೆ ಆಗಮಿಸಿದ ಆರ್ಎಫ್ಓ ತಂಡ ಸ್ಥಳದಲ್ಲಿಯೇ ಮರಗಳ್ಳರಾದ ನಾಗಮಂಗಲ ಗ್ರಾಮ ಮುನಿನಾರಾಯಣಪ್ಪ, ವಿಜಯಪುರ ಪಟ್ಟಣದ ಮಂಜುನಾಥ್, ಬೀಡಗಾನಹಳ್ಳಿ ಮಂಜುನಾಥ್, ನಡಪಿನಾಯಕನಹಳ್ಳಿ ನಾಗರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮರಗಳ್ಳನೊಬ್ಬ ಮರಗಳ್ಳತನಕ್ಕೆ ಅರಣ್ಯ ಅಧಿಕಾರಿ ಅವರ ಹೆಸರು ಹೇಳಿದ್ದು, ಅವರಿಂದಲೇ ಮರಗಳನ್ನು ಕಡಿದು ಸಾಗಾಟ ಮಾಡಿ, ಮಾರಾಟ ಮಾಡುತ್ತಿರುವ ಆಘಾತಕಾರಿ ವಿಷಯ ಇಲಾಖೆ ಕಾರ್ಯಚರಣೆ ವೇಳೆ ಬೆಳಕಿಗೆ ಬಂದಿದ್ದು, ಈ ಕುರಿತು ಆರ್ ಎಫ್ ಓ ನಾಗರ್ಜುನ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, ಮರ ಕಡಿಯುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿದೆವು. ಮರ ಕಡಿದವರನ್ನು ವಶಕ್ಕೆ ಪಡೆದು, ವಾಹನ ಸಮೇತ ಜಪ್ತಿ ಮಾಡಿದ್ದೇವೆ.
ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದೇವೆ. ಅರಣ್ಯ ಅಧಿಕಾರಿಯ ಮೇಲಿನ ಆರೋಪದ ಕುರಿತು ವಿಚಾರಿಸಿದಾಗ, ಮರಗಳ್ಳರು ಹೆಸರು ಹೇಳಿದ್ದು, ಇಲಾಖೆಯಿಂದ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.



