ಬೆಂಗಳೂರು : ನಟಿ ಪ್ರಿಯಾಂಕಾ ಉಪೇಂದ್ರ ಪೋನ್ ಹ್ಯಾಕ್ ಮಾಡಿದ್ದ ವಂಚಕನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ ಮೂಲದ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದ್ದು, ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ, ಅದರಲ್ಲಿದ್ದ ನಂಬರ್‌ಗಳಿಗೆ ಮೆಸೇಜ್ ಮಾಡಿ ದುಡ್ಡು ಕೇಳಿದ್ದ.
ನಟಿ ದೂರಿನ ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಿಹಾರದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಪ್ರಿಯಾಂಕಾ ಅವರ ಮಗನಿಂದ ಹಾಕಿಸಿಕೊಂಡಿದ್ದ 50 ಸಾವಿರ ರೂ. ಹಣವನ್ನು ಕುಡಿದು ಖಾಲಿ ಮಾಡಿರುವುದಾಗಿ ತಿಳಿಸಿದ್ದಾನೆ.
ಸೆ.15ರಂದು ವಂಚಕ ಪ್ರಿಯಾಂಕಾ ಉಪೇಂದ್ರ ಅವರಿಗೆ ಕರೆ ಮಾಡಿ, ನಿಮ್ಮ ಆರ್ಡರ್ ಡೆಲಿವರಿ ಮಾಡಲು ನನಗೆ ವಿಳಾಸ ಸಿಗುತ್ತಿಲ್ಲ. ಹೀಗಾಗಿ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇನೆ ಎಂದು ತಿಳಿಸಿದ್ದ. ಅದರಂತೆ ಹ್ಯಾಶ್‌ಟ್ಯಾಗ್ ಸಹಿತ ನಂಬರ್ ಕಳುಹಿಸಿದ್ದ.
ಆ ಮೊಬೈಲ್ ಸಂಖ್ಯೆಗೆ ಡಯಲ್ ಮಾಡುತ್ತಿದ್ದಂತೆ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿತ್ತು. ಮೊದಲಿಗೆ ಮೊಬೈಲ್ ಫೋನ್‌ನಲ್ಲಿ ಸಮಸ್ಯೆ ಇರಬಹುದು ಎಂದು ಭಾವಿಸಿದ್ದರು. ಅಷ್ಟರಲ್ಲಿ ಉಪೇಂದ್ರ ಹಾಗೂ ಅವರ ಪರಿಚಯವಿದ್ದ ಮಹಾದೇವ್ ಅವರ ಮೊಬೈಲ್ ಫೋನ್ ಸಹ ಹ್ಯಾಕ್ ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಹ್ಯಾಕರ್ ಕರೆ ಮಾಡಿದಾಗ ಮನೆಗೆ ಕೆಲವು ವಸ್ತುಗಳನ್ನು ಆನ್‌ಲೈನ್‌ನಲ್ಲಿ ನಟಿ ಪ್ರಿಯಾಂಕಾ ಆರ್ಡರ್ ಮಾಡಿದ್ದರಂತೆ. ಆ ವಸ್ತುಗಳನ್ನು ಡೆಲಿವರಿ ಮಾಡುವವರೇ ಕರೆ ಮಾಡಿರಬಹುದು ಎಂದು ಭಾವಿಸಿದ್ದರು.



