ಮದ್ದೂರು: ಕಳೆದೆರಡು ವರ್ಷಗಳಿಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಅತ್ಯಂತ ಕ್ರಿಯಾಶೀಲವಾಗಿ ಕಸಾಪ ಅಧ್ಯಕ್ಷರಾದ ವಿ.ಸಿ.ಉಮಾಶಂಕರ್ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಕಸಾಪ ಜಿಲ್ಲಾ ಉಪಾಧ್ಯಕ್ಷರಾದ ಪ್ರೊ.ಬಿ.ಎಸ್.ಬೋರೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕನ್ನಡ ಕಟ್ಟಾಳುಗಳ ಸಭೆಯಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕುವೆಂಪು ಜಯಂತಿ, ಹುತಾತ್ಮ ದಿನಾಚರಣೆ, ನಾಡು ನುಡಿಗಾಗಿ ವಿಚಾರ ಸಂಕಿರಣ, ನೆಲ, ಜಲ ಭಾಷೆಗಾಗಿ ಹೋರಾಟ, ತಾಲೂಕಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷರಾದ ಚಾಮಲಾಪುರ ರವಿಕುಮಾರ್ ಅವರು ವಿ.ಸಿ.ಉಮಾಶಂಕರ್ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಿಸಿದ ನಂತರ ರಾಜ್ಯ ಸಮಿತಿ ವರದಿ ಸಲ್ಲಿಸಬೇಕಿತ್ತು. ಅಷ್ಟರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾದ ಕಾರಣ ಕೇಂದ್ರ ಕಚೇರಿಗೆ ಮಾಹಿತಿ ಸಲ್ಲಿಸಲು ಸಾಧ್ಯವಾಗಿಲ್ಲ ಮುಂದಿನ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ವಿ.ಸಿ. ಉಮಾಶಂಕರ ಅವರನ್ನೇ ಮುಂದುವರಿಸುವುದು ಎಂದು ಅನುಮೋದಿಸಲಾಗುವುದು ಎಂದರು.
ಪತ್ರದ ಮೂಲಕ ಮದ್ದೂರು ತಾಲೂಕು ಅಧ್ಯಕ್ಷ ಯಾರು ಎಂದು ಕೇಂದ್ರ ಕಚೇರಿಗೆ ಪತ್ರ ಬರೆದ ಕಾರಣ ಸುನಿಲ್ಕುಮಾರ್ ಅಧ್ಯಕ್ಷರು ಎಂದು ಮಾಹಿತಿ ನೀಡಿದ್ದಾರೆ. ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಅವರು ಬುಧವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಆ ಸಂದರ್ಭದಲ್ಲಿ ಮದ್ದೂರು ತಾಲೂಕಿನ ಅಧ್ಯಕ್ಷರ ಗೊಂದಲ ಬಗೆಹರಿಯಲಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾ ಸಂಘಟನಾ ಕಾರ್ಯದಶರ್ಿ ಸಿ.ಎಂ.ಕ್ರಾಂತಿಸಿಂಹ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೈಲ ನಿಯಮದ ಪ್ರಕಾರ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡುವುದು ಜಿಲ್ಲಾಧ್ಯಕ್ಷರ ಪರಮಾಧಿಕಾರವಾಗಿದೆ. ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಅಲ್ಲದೆ, ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ವಿ.ಸಿ. ಉಮಾಶಂಕರ್ ಅವರು ಪ್ರಾರಂಭದಿಂದಲೂ ಕನ್ನಡ ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಗೆ ಬಂದಿದೆ ವೈಭವಿತವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಇಂತಹ ಸಮಯದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.
ಕಸಾಪ ಅಧ್ಯಕ್ಷ ವಳಗೆರಹಳ್ಳಿ ವಿ.ಸಿ.ಉಮಾಶಂಕರ್ ಮಾತನಾಡಿ, ನಾನು ಅಧ್ಯಕ್ಷನಾದ ಅಂದಿನಿಂದ ಇಂದಿನವರೆಗೂ ಕ್ರೀಯಾತ್ಮಕ ಮತ್ತು ಸಂಘಟನಾತ್ಮಕವಾಗಿ ಕೆಲಸ ಮಾಡುವುದರ ಜೊತೆಗೆ, ರಾಜ್ಯ ಮತ್ತು ಜಿಲ್ಲಾ ಸಮಿತಿಯ ಆದೇಶಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಕನ್ನಡದ ಕೆಲಸವನ್ನು ಮಾಡಿದ್ದೇನೆ. ಅಲ್ಲದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಮ್ಮೇಳನದ ಯಶಸ್ಸಿಗೆ ಪೂರಕವಾಗುವಂತೆ ಮಾತನಾಡಿದ್ದೇನೆ. ತಾಲೂಕಿನಲ್ಲಿ ಗೊಂದಲ ಸೃಷ್ಟಿಸುವುದನ್ನು ಬಿಟ್ಟು ಕನ್ನಡ ಕಟ್ಟುವ ಕೆಲಸಕ್ಕೆ ನಮಗೆ ಶಕ್ತಿ ನೀಡಬೇಕು ಎಂದು ಕೋರಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಪ್ರೊ. ಬಿ.ಎಸ್.ಬೋರೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಂ.ಕ್ರಾಂತಿಸಿಂಹ, ತಾಲೂಕು ಅಧ್ಯಕ್ಷ ವಿ.ಸಿ.ಉಮಾಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ಕರಡಕರೆ ವಸಂತ, ಗೌರವಾಧ್ಯಕ್ಷೆ ಮಂಜುಳಾ ಬೋರೇಗೌಡ, ಸೌಭಾಗ್ಯಮ್ಮ, ಉಪಾಧ್ಯಕ್ಷ ತಿಪ್ಪೂರು ರಾಜೇಶ್ ಹಾಗೂ ಶಶಿಕಲಾ, ವಿ.ಎಚ್. ಶಿವಲಿಂಗಯ್ಯ, ಸೋಫುರ ಉಮೇಶ್, ಶ್ರೀನಿವಾಸ್, ಪಟೇಲ್ ಹರೀಶ್, ಜಯಲಕ್ಷ್ಮಿ, ಪುಟ್ಟರತ್ನಮ್ಮ, ಧರಣಿ, ವೆಂಕಟೇಶ್, ಕರಡಕೆರೆ ಯೋಗೇಶ್, ಅಣ್ಣೂರು ಮಹೇಂದ್ರ, ಎಂ. ವೀರಪ್ಪ, ತೂಬಿನಕೆರೆ ರಾಜು, ಕಲಾವಿದ ಬಾಲಕೃಷ್ಣ, ಮರಳಿಗ ಶಿವರಾಜು, ಶಶಿಕುಮಾರ್ ಇದ್ದರು.