ಚಾಮರಾಜನಗರ : ವರನಟ ಡಾ. ರಾಜ್ ಕುಮಾರ್ ಅವರ ಸೋದರಿ ನಾಗಮ್ಮ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಅವರು ಹಲವು ದಿನಗಳಿಂದ ಬಳಲುತ್ತಿದ್ದರು. ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ಫಲಿಸದೆ ಶುಕ್ರವಾರ ಅವರು ತಮ್ಮ ಗಾಜನೂರಿನ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸಾಗಿತ್ತು. ರಾಜ್ ಕುಮಾರ್ ತಲೆಮಾರಿನಲ್ಲೇ ನಾಗಮ್ಮ ಅತ್ಯಂತ ಹಿರಿಯರಾಗಿದ್ದರು. ವರನಟ ಡಾ. ರಾಜ್ ಕುಮಾರ್ ಅವರ ಸೋದರ ವರದಣ್ಣ ಮತ್ತು ಡಾ . ರಾಜ್ ಕುಮಾರ್ ಅವರ ನಿಧನದ ಬಳಿಕ ಅಣ್ಣಾವ್ರ ಮನೆಯ ಸದಸ್ಯರೆಲ್ಲರೂ ಇವರನ್ನೇ ವಂಶದ ಹಿರಿಯರೆಂದು ಆದರಿಸುತ್ತಿದ್ದರು. ಖ್ಯಾತ ರಂಗಕರ್ಮಿ ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರಿಗೆ ಡಾ.ರಾಜ್ ಕುಮಾರ್ ಸೇರಿದಂತೆ ನಾಲ್ವರು ಮಕ್ಕಳು. ವರದರಾಜು, ಶಾರದಮ್ಮ ಮತ್ತು ನಾಗಮ್ಮ ಪೈಕಿ ಕೊನೆಯವರು ಇಂದು ನಿಧನರಾಗಿದ್ದಾರೆ.
ಮೃತ ಗೌರಮ್ಮ ಅವರಿಗೆ ಇಬ್ಬರು ಪುತ್ರಿಯರೂ ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ.
ಮೃತರ ಅಂತ್ಯಸಂಸ್ಕಾರ ಹಾಗೂ ಅಂತಿಮ ವಿಧಿವಿಧಾನಗಳು ಶನಿವಾರ ಗಾಜನೂರಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ನಾಗಮ್ಮ ಅವರ ಅಂತ್ಯಸಂಸ್ಕಾರಕ್ಕೆ ನಟ ಶಿವರಾಜ್ ಕುಮಾರ್, ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ದಿವಗಂತ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತಿತರರು ಕುಟುಂಬ ಸಹಿತ ತೆರಳುವ ಸಾಧ್ಯತೆಯಿದೆ.