ಬೆಂಗಳೂರು: “ನಿಮ್ಮ ಕನ್ನಡ ಭಾಷೆ ನಮ್ಮ ತಮಿಳಿನಿಂದ ಹುಟ್ಟಿದ್ದು” ಎಂಬ ನಟ ಕಮಲ್ ಹಾಸನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಮೇ 28) ಪ್ರತಿಕ್ರಿಯಿಸಿ, “ಕಮಲ್ ಹಾಸನ್‌ಗೆ ಕನ್ನಡದ ಇತಿಹಾಸದ ತಿಳಿವಳಿಕೆಯಾಗಿಲ್ಲ” ಎಂದು ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, “ಕನ್ನಡಕ್ಕೆ ದೀರ್ಘ ಇತಿಹಾಸವಿದೆ. ಪಾಪ, ಅವರಿಗೆ ಅದರ ಅರಿವಿಲ್ಲ” ಎಂದರು.
ಇತ್ತೀಚೆಗೆ ಚೆನ್ನೈನಲ್ಲಿ “ಥಗ್ ಲೈಫ್” ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲ್ ಹಾಸನ್, ನನ್ನ ಜೀವನ ಮತ್ತು ನನ್ನ ಕುಟುಂಬ ಕೂಡಾ ತಮಿಳು ಭಾಷೆಯದ್ದಾಗಿದೆ. ಆ ಕಾರಣಕ್ಕಾಗಿಯೇ ನಟ ಶಿವರಾಜ್ ಕುಮಾರ್ ಕೂಡಾ ಇಲ್ಲಿಗೆ ಬಂದಿದ್ದಾರೆ. ಅದರಿಂದಾಗಿಯೇ ನಾನು ನನ್ನ ಭಾಷಣವನ್ನು ಜೀವನ, ಸಂಬಂಧ ಮತ್ತು ತಮಿಳಿನಿಂದ ಆರಂಭಿಸಿದ್ದೆ. ನಿಮ್ಮ ಕನ್ನಡ ಭಾಷೆ ಕೂಡಾ ತಮಿಳಿನಿಂದ ಹುಟ್ಟಿದ್ದು” ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಈ ಕುರಿತು ಕನ್ನಡ ಪರ ಸಂಘಟನೆಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.