ಜೂನ್ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತಮಿಳುನಾಡಿನ ಡಿಎಂಕೆ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ನಟ ಕಮಲ್ ಹಾಸನ್ ಅವರೂ ಸೇರಿದ್ದಾರೆ. ಡಿಎಂಕೆ ಮೈತ್ರಿಕೂಟದ ಅಂಗವಾಗಿರುವ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯಂ ಪಕ್ಷಕ್ಕೆ ಒಂದು ಸ್ಥಾನ ನೀಡಲಾಗಿದ್ದು, ಅವರ ನಾಮನಿರ್ದೇಶನವನ್ನು ಡಿಎಂಕೆ ಘೋಷಿಸಿದೆ.
ಇದರ ಜೊತೆಗೆ ಸಲ್ಮಾ ಪಿ. ವಿಲ್ಸನ್ ಮತ್ತು ಎಸ್.ಆರ್. ಶಿವಲಿಂಗಂ ಅವರನ್ನೂ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದೆ. ಜುಲೈನಲ್ಲಿ ತಮಿಳುನಾಡಿನಿಂದ ಆರು ರಾಜ್ಯಸಭಾ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಡಿಎಂಕೆ ನಿರಾಯಾಸವಾಗಿ 4 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಎಐಎಡಿಎಂಕೆಗೆ, ಬಿಜೆಪಿ ಮುಂತಾದ ಪಕ್ಷಗಳ ಬೆಂಬಲದಿಂದ 2 ಸ್ಥಾನ ಲಭ್ಯವಾಗಬಹುದು.
ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ಶಿವರಾಜ್ ಕುಮಾರ್ ಅವರನ್ನು ಉಲ್ಲೇಖಿಸಿ ಮಾತನಾಡುತ್ತ, ಇದು ನನ್ನ ಕುಟುಂಬ. ಅದಕ್ಕಾಗಿಯೇ ಅವರು (ಶಿವರಾಜ್ಕುಮಾರ್) ಇಲ್ಲಿಗೆ ಬಂದಿದ್ದಾರೆ. ನಿಮ್ಮ ಭಾಷೆ (ಕನ್ನಡ) ಕೂಡ ತಮಿಳಿನಿಂದ ಹುಟ್ಟಿಕೊಂಡಿದೆ ಎಂದು ಹೇಳಿದ್ದು, ಈ ಹೇಳಿಕೆಗೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅವರು ತಕ್ಷಣ ಕ್ಷಮೆ ಯಾಚಿಸಬೇಕೆಂದು ಕನ್ನಡಿಗರು ಒತ್ತಾಯಿಸಿದ್ದಾರೆ.