ಗುಂಡ್ಲುಪೇಟೆ: ತಾಲೂಕಿನ ತೆಂಕಲಹುಂಡಿ ಗ್ರಾಮದ ಜೈವೀರ ಅಭಯಶಕ್ತಿ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯಕ್ಕೆ ಚಿತ್ರನಟ ಶ್ರೀನಾಥ್ ಭೇಟಿ ನೀಡಿ ಪೂಜೆ ಸಲ್ಲಿಸಿ, ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ತೆಂಕಲಹುಂಡಿ ಗ್ರಾಮಕ್ಕೆ ಚಿತ್ರನಟ ಶ್ರೀನಾಥ್ ಆಪ್ತ ಸ್ನೇಹಿತರು ಮತ್ತು ಅವರ ಕುಟುಂಬಸ್ಥರೊಂದಿಗೆ ಆಗಮಿಸಿದರು. ಈ ವೇಳೆ ಟ್ರಸ್ಟ್ ವತಿಯಿಂದ ಶಾಲು ಹೊದಿಸಿ, ಹಾರ ಹಾಕಿ ಬರಮಾಡಿಕೊಳ್ಳಲಾಯಿತು. ನಂತರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮ ಮತ್ತು ತಾಲೂಕಿನ ಜನರಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಹಾರೈಸಿದರು. ನಂತರ ಗ್ರಾಮಸ್ಥರೊಬ್ಬರ ನಿವಾಸದಲ್ಲಿ ವಿಶ್ರಾಂತಿ ಪಡೆದರು.
ಈ ವೇಳೆ ಗ್ರಾಮದ ತಮ್ಮದೇ ಜಾಗದಲ್ಲಿ ದುಬಾರಿ ವೆಚ್ಚದಲ್ಲಿ ದೇವಾಲಯ ನಿರ್ಮಾಣಕ್ಕೆ ಪ್ರೇರಣೆ ಎಂಬುದು ಮತ್ತು ಟ್ರಸ್ಟ್‌ನ ಸೇವಾ ಕಾರ್ಯಗಳ ಬಗ್ಗೆ ದೇವಾಲಯ ಟ್ರಸ್ಟ್‌ನ ಕಾರ್ಯನಿರ್ವಾಹಕ ನವೀನ್ ರಿಂದ ಮಾಹಿತಿ ಪಡೆದುಕೊಂಡರು. ಗ್ರಾಮಸ್ಥರು ನೆಚ್ಚಿನ ನಟನನ್ನು ಕಂಡು ಖುಷಿ ವ್ಯಕ್ತಪಡಿಸಿದರು. ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟರು. ಜೈವೀರ ಅಭಯಶಕ್ತಿ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಟ್ರಸ್ಟ್‌ನ ಜವರೇಗೌಡ ಇತರರು ಹಾಜರಿದ್ದರು.