ಅಹಮದಾಬಾದ್: ಸೂರ್ಯನ ಅಧ್ಯಯನಕ್ಕಾಗಿ ಭಾರತ ನಿರ್ಮಿಸಿರುವ ಪ್ರಥಮ ಅಂತರಿಕ್ಷ ವೀಕ್ಷಣಾಲಯ ಆದಿತ್ಯ ಎಲ್ 1 ಯೋಜನೆಯ ನೌಕೆಯ ನಿಗದಿತ ಲಗ್ರಾಂಜಿಯನ್ ಬಿಂದು ಎಲ್ 1 ಅನ್ನು ಜ.6 ರಂದು ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
ಅಹಮದಾಬಾದ್ ನ ಸೈನ್ಸ್ ಸಿಟಿಯಲ್ಲಿ ವಿಜ್ಞಾನ ಭಾರತಿ (ವಿಭಾ) ಮತ್ತು ಗುಜರಾತ್ ಸರ್ಕಾರದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಯುವ ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
‘ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಎಲ್1ಗೆ ತಲುಪಲು ಸೆಪ್ಟೆಂಬರ್ 2ರಂದು ಶ್ರೀಹರಿಕೋಟದ ಇಸ್ರೊ ಉಡಾವಣಾ ಕೇಂದ್ರದಿಂದ ‘ಆದಿತ್ಯ–ಎಲ್ 1’ ನೌಕೆ ಹೊತ್ತ ಪಿಎಸ್‌ಎಲ್‌ವಿ–ಸಿ 57 ರಾಕೆಟ್ ನಭಕ್ಕೆ ಚಿಮ್ಮಿತ್ತು. ಒಂದು ಬಾರಿ ಎಲ್1 ಬಿಂದುವನ್ನು ನೌಕೆ ತಲುಪಿದ ನಂತರ, ಎಂಜಿನ್ ಅನ್ನು ಮರು ಆರಂಭಿಸಲಾಗುವುದು. ಇದರಿಂದ ನೌಕೆಯು ಮತ್ತೆ ಮುಂದೆ ಹೋಗದಂತೆ ಇದು ಕೆಲಸ ಮಾಡಲಿದೆ. ಜತೆಗೆ ಅಲ್ಲಿಯೇ ಸುತ್ತುತ್ತಾ ಎಲ್1ನಲ್ಲಿಯೇ ಸಿಲುಕಿಕೊಳ್ಳಲಿದೆ’ ಎಂದು ವಿವರಿಸಿದರು.
ಈ ಹಂತದ ನಂತರ ಮುಂದಿನ ಐದು ವರ್ಷಗಳವರೆಗೆ ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ನೌಕೆ ಗಮನಿಸುತ್ತದೆ. ಇದರಲ್ಲಿ ಅಳವಡಿಸಿರುವ ಉಪಕರಣಗಳು ಸಂಗ್ರಹಿಸುವ ಮಾಹಿತಿಯು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಬಹುಮುಖ್ಯವಾಗಿರಲಿದೆ ಎಂದು ಸೋಮನಾಥ್ ತಿಳಿಸಿದರು
ಮುಂದಿನ 25 ವರ್ಷಗಳಲ್ಲಿ ಭಾರತೀಯ ವಿಜ್ಞಾನಿಗಳು ಚಂದ್ರನ ಮೇಲೆ ಇಳಿಯಲಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳು ಜ್ಞಾನ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಸಂಶೋಧನೆಯು ಸಮಾಜದ ಕಲ್ಯಾಣಕ್ಕೆ ಬಳಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮಗಳ ನಡುವೆ ಸಮನ್ವಯ ಮತ್ತು ವಿನಿಮಯ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಗುರಿಯನ್ನು ಸಾಧಿಸುವಲ್ಲಿ ತಂತ್ರಜ್ಞಾನದ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 21ರಿಂದ ಆರಂಭವಾಗಿರುವ ಭಾರತೀಯ ವಿಜ್ಞಾನ ಸಮ್ಮೇಳನ, 24ರವರೆಗೆ ನಡೆಯಲಿದೆ. ಈ ಸಮ್ಮೇಳನದಲ್ಲಿ ದೇಶದ ಪ್ರಮುಖ ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಂಶೋಧಕರು ಭಾಗವಹಿಸುತ್ತಿದ್ದಾರೆ.
ಸದ್ಯ ಭಾರತದ ಬಳಿ 10 ಟನ್ ವರೆಗೆ ಭಾರ ಸಾಗಿಸಬಲ್ಲ ರಾಕೆಟ್ ಇದೆ. 20 ರಿಂದ 1,215 ಟನ್ ಗಳ ಭಾರವನ್ನು ಸಾಗಿಸಲು ಸಾಧ್ಯವಾಗುವಂಥ ಹೊಸ ರಾಕೆಟ್ ಅನ್ನು ಇಸ್ರೋ ಅಭಿವೃದ್ಧಿಪಡಿಸುತ್ತಿದೆ ಎಂದೂ ಸೋಮನಾಥ್ ಅವರು ಮಾಹಿತಿ ನೀಡಿದ್ದಾರೆ.