ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ದೇಶದಲ್ಲೇ ಮೊದಲ ಬಾರಿಗೆ ಸ್ನಾತಕ-ಸ್ನಾತಕೋತ್ತರ ಪದವಿಯಲ್ಲಿ ಆನ್‌ಲೈನ್ ಪದವಿ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿದ್ದು, ಸೆ.೧ರಿಂದ ಅಭ್ಯರ್ಥಿಗಳ ಪ್ರವೇಶಾತಿ ಕಾರ್ಯ ಶುರುವಾಗಿದೆ.
ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಪದವಿ ಶಿಕ್ಷಣದ ಪ್ರವೇಶವನ್ನು ವಿಸ್ತರಿಸುವ ಹಾಗೂ ಪದವಿ ಶಿಕ್ಷಣದ ಕಲಿಕೆಯಲ್ಲಿ ಆಸಕ್ತಿಯುಳ್ಳವರಿಗಾಗಿ ಆನ್‌ಲೈನ್ ಪದವಿ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಪ್ರಾರಂಭಿಸಲಾಗಿದೆ. ಸ್ನಾತಕ ಮತ್ತು ಸ್ನಾತಕೋತ್ತರ ಸೇರಿದಂತೆ ೧೫ ಕೋರ್ಸ್‌ಗಳ ಆರಂಭಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅನುಮೋದನೆ ನೀಡಿದ್ದರೆ, ೧.೧೦ ಲಕ್ಷ ಅಭ್ಯರ್ಥಿಗಳ ಪ್ರವೇಶಕ್ಕೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಅನುಮತಿ ನೀಡಿದೆ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.
ಸಾತಗಳ್ಳಿಯಲ್ಲಿರುವ ವಿಟಿಯುನ ಪ್ರಾದೇಶಿಕ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರ್‍ಯಾಂಕಿಂಗ್ ಫ್ರೇಮ್ ವರ್ಕ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ೫೨ನೇ ರ್‍ಯಾಂಕ್, ತಾಂತ್ರಿಕ-ತಾಂತ್ರಿಕೇತರ ವಿವಿಗಳಲ್ಲಿ ೬೩ನೇ ಸ್ಥಾನದಲ್ಲಿದೆ. ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ೯೫ನೇ ಸ್ಥಾನ ಸಾಧಿಸಲಾಗಿದೆ. ಹಾಗಾಗಿ, ಎನ್‌ಐಆರ್‌ಎಫ್ ರ್‍ಯಾಂಕಿಂಗ್‌ನಲ್ಲಿ ೪೦ನೇ ಸ್ಥಾನದ ಒಳಗೆ ಬರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಆನ್‌ಲೈನ್ ಕೋರ್ಸ್‌ಗಳಿಗೆ ಬೇಡಿಕೆ ಇರುವ ಜತೆಗೆ ಐಟಿ-ಬಿಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಯುಜಿ ಪದವಿ ಪಡೆಯಲು ಅನುಕೂಲವಾಗಲೆಂದು ಆನ್‌ಲೈನ್ ಕೋರ್ಸ್ ಶುರು ಮಾಡುತ್ತಿದ್ದೇವೆ. ದೇಶದ ೧೦ ತಾಂತ್ರಿಕ ವಿವಿಗಳಲ್ಲಿ ವಿಟಿಯು ಮೊದಲನೆಯದ್ದಾಗಿದೆ. ಈ ಕೋರ್ಸ್‌ಗಳನ್ನು ತೆರೆಯುತ್ತಿರುವುದು ದೇಶದಲ್ಲೇ ಮೊದಲ ತಾಂತ್ರಿಕ ವಿವಿಯಾಗಿದೆ ಎಂದು ನುಡಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಮೂರು ಪದವಿ, ೧೨ ಸ್ನಾತಕೋತ್ತರ ಪದವಿ ಶ್ರೇಣಿಯ ಕೋರ್ಸ್‌ಗಳನ್ನು ಆರಂಭಿಸಲು ಅನುಮೋದನೆ ನೀಡಿದ್ದರೆ, ಯುಜಿಸಿಯಿಂದ ಅರ್ಹತೆ ಪಡೆದ ಮೊದಲ ತಾಂತ್ರಿಕ ವಿವಿಯಾಗಿದೆ ಎಂದರು. ಯುವಜನರು, ವೃತ್ತಿ ಜೀವನದ ಮಧ್ಯೆದಲ್ಲಿ, ವೃತ್ತಿಪರರು, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಮನೋಭಾವ ಹೊಂದಿರುವ ಇತರರು ವಿಶ್ವ ದರ್ಜೆಯ ಶೈಕ್ಷಣಿಕ ಅವಕಾಶಗಳಿಗೆ ಪ್ರವೇಶ ಹೊಂದಿದ್ದಾರೆ.
ವಿಟಿಯುನಲ್ಲಿ ಆನ್‌ಲೈನ್ ಪ್ರೋಗ್ರಾಂಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ದಾಖಲಾತಿಗಳು ಆರಂಭಿಸಲಾಗಿದ್ದು, ಸೆ.೩೦ರವರೆಗೆ ಅವಕಾಶ ಕಲ್ಪಿಸಲಾಗಿದೆ. ದಾಖಲಾತಿ ಶುಲ್ಕ, ಪಾವತಿ, ತರಗತಿಗಳು ಮತ್ತು ಪಠ್ಯ ಸಾಮಗ್ರಿಗಳು, ಹಾಗೆಯೇ ಪರೀಕ್ಷೆಗಳು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ.
ವಿಟಿಯು ಆನ್‌ಲೈನ್ ಶಿಕ್ಷಣದ ನಿರ್ದೇಶಕ ಡಾ.ಟಿ.ಪಿ.ರೇಣುಕಾಮೂರ್ತಿ, ಉಪ ನಿರ್ದೇಶಕಿ ಡಾ.ಪಿ.ಸಂಧ್ಯಾ, ಸಹಾಯಕ ನಿರ್ದೇಶಕ ಡಾ.ಪಿ.ಕೆ.ಕುಮಾರ, ವಿಶೇಷ ಅಧಿಕಾರಿ ಪಿ.ಪ್ರಕೃತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.