ವರದಿ :ಸ್ಟೀಫನ್ ಜೇಮ್ಸ್
ಬೆಳಗಾವಿ
ಸಂಸತ್ ಹಾಗೂ ವಿಧಾನಸಭೆ ಚುನಾವಣೆಗಿಂತಲೂ ಹೆಚ್ಚು ಪ್ರತಿಷ್ಠಗೆ ಒಳಗಾಗಿದ್ದ ಸಹಕಾರ ಕ್ಷೇತ್ರದ ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಮತದಾನ ಹಾಗೂ ಫಲಿತಾಂಶ ರವಿವಾರ ಹೊರಬಿದ್ದಿದೆ.
ಇತ್ತೀಚೆಗೆ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ ಕತ್ತಿ ಬಣ ಸಂಪೂರ್ಣ ಗೆದ್ದು ಬೀಗಿತ್ತು. ಅದೇ ರೀತಿ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಏಕಪಕ್ಷೀಯ ಗೆಲವು ಸಾಧಿಸಲು ರಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿ ಬಣಕ್ಕೆ ಸಾಧ್ಯವಾಗದಿದ್ದರೂ ವೈಯಕ್ತಿಕವಾಗಿ ಆಯ್ಕೆಯಾಗಿ ಎಂದಿನಂತೆ ಮೀಸೆ ತಿರುವಿದ್ದಾರೆ.
ಒಟ್ಟು 16 ಸ್ಥಾನಗಳ ಪೈಕಿ 12ಸ್ಥಾನಗಳನ್ನು ಜಾರಕಿಹೊಳಿ ಸಹೋದರರ ಬಣ ತನ್ನದಾಗಿಸಿಕೊಂಡಿದೆ, ಉಳಿದವು ರಮೇಶ ಕತ್ತಿ ಬಣದ ಪಾಲಾಗಿವೆ.
ಒಟ್ಟು 16ಮತಕ್ಷೇತ್ದಗಳ ಪೈಕಿ ಚುನಾವಣೆಗೆ ಮುಂಚೆಯೇ 9 ಕ್ಷೇತ್ರಗಳಲ್ಲಿ ಅವಿರೋಧವಾಗಿ ಅಭ್ಯರ್ಥಿಗಳು ಗೆದ್ದು ಬೀಗಿದ್ದರು.
ಕಾಗವಾಡ ಕ್ಷೇತ್ರದಿಂದ ಶಾಸಕ ಭರಮಗೌಡ ಅಲಗೌಡ ಕಾಗೆ, ಗೋಕಾಕದಿಂದ ಅಮರನಾಥ ರಮೇಶ ಜಾರಕಿಹೊಳಿ, ಖಾನಾಪುರ ಕ್ಷೇತ್ರದಿಂದ ಮಾಜಿ ಶಾಸಕ ಅರವಿಂದ ಚಂದ್ರಕಾಂತ ಪಾಟೀಲ, ಚಿಕ್ಕೋಡಿ ಕ್ಷೇತ್ರದಿಂದ ಶಾಸಕ ಗಣೇಶ ಪ್ರಕಾಶ ಹುಕ್ಕೇರಿ, ಬೆಳಗಾವಿ ಕ್ಷೇತ್ರದಿಂದ ರಾಹುಲ್ ಸತೀಶ ಜಾರಕಿಹೊಳಿ, ಮೂಡಲಗಿ ಕ್ಷೇತ್ರದಿಂದ ನೀಲಕಂಠ ಬಸವರಾಜ ಕಪ್ಪಲಗುದ್ದಿ, ಯರಗಟ್ಟಿ ಕ್ಷೇತ್ರದಿಂದ ಶಾಸಕ ವಿಶ್ವಾಸ ವಸಂತ ವೈದ್ಯ, ಸವದತ್ತಿ ವೀರುಪಾಕ್ಷಿ ಕರಿಬಸಪ್ಪ ಮಾಮನಿ ಹಾಗೂ ಬೆಳಗಾವಿ ಗ್ರಾಮೀಣದಿಂದ ಪರಿಷತ್ ಸದಸ್ಯ ಚನ್ನರಾಜ ಬಸವರಾಜ ಹಟ್ಟಿಹೊಳಿ ಆಯ್ಕೆಯಾಗಿದ್ದರು. ರವಿವಾರ ಚುನಾವಣೆ ಒಟ್ಟು 7ಕ್ಷೇತ್ರಗಳಿಗೆ ನಡೆದಿತ್ತು.
ಚುನಾವಣೆ ಹಿನ್ನೆಲೆಯಲ್ಲಿ ನಗರದ ಬಿ. ಕೆ. ಮಾಡಲ್ ಹೈಸ್ಕೂಲ್ ಸುತ್ತ ನಗರ ಪೋಲಿಸರು ಸೆಕ್ಷನ್ 144 ಜಾರಿ ಮಾಡುವ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಿದ್ದರು. ಚುನಾವಣೆ ಮತ ಎಣಿಕೆ ಮುನ್ನವೇ ನಗರದ ಕಲ್ಬ್ ರಸ್ತೆಯ ಖಾಸಗಿ ಹೊಟೇಲನಲ್ಲಿ ನಾಮಪತ್ರ ಸಂಬಂಧ ಜಾರಕಿಹೊಳಿ ಹಾಗೂ ಸವದಿ ಬೆಂಬಲಿಗರ ನಡುವೆ ವಾಗ್ವಾದ, ಗುದ್ದಾಟ ನಡೆದು ಕೈಕೈ ಮಿಲಾಯಿಸಿದರು. ಈ ಹಂತದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಕುಟುಂಬಗಳ ರಾಜಕೀಯ ಪ್ರತಿಷ್ಠೆ ಹಾಗೂ ಕಿತ್ತಾಟ, ಪರಸ್ಪರ ಕೆಸರೆರಚಾಟ ಕಳೆದ ಒಂದು ತಿಂಗಳಿಂದ ನಡೆದೇ ಇತ್ತು. ಸಹಕಾರ ಕ್ಷೇತ್ರದ ಡಿಸಿಸಿ ಬ್ಯಾಂಕ್ ನ ಅಧಿಕಾರದ ಗದ್ದುಗೆ ಹಿಡಿಯುವ ಜಿದ್ದಾಜಿದ್ದಿಯ ಪ್ರಹಸನ ರವಿವಾರ ಸಂಜೆಯ ಫಲಿತಾಂಶದ ನಂತರ ತಣ್ಣಗಾಗಿದೆ. ದೀಪಾವಳಿ ಸಡಗರದ ಮಧ್ಯೆ ಜಂಜಾಟದ ಚುನಾವಣೆ ಸುಖಾಂತ್ಯಗೊಂಡಿತು.
ಗೆದ್ದ ಕ್ಷೇತ್ರಗಳು:
ರಾಮದುರ್ಗದಿಂದ ಮಲ್ಲಪ್ಪ ಶಿವಲಿಂಗಪ್ಪ ಯಾದವಾಡ, 19ಮತಗಳು ಹಾಗೂ ಶ್ರೀಕಾಂತ್ ಶಿವಶಂಕರಪ್ಪ ಧವನ 16ಮತಗಳು.
ಅಥಣಿ ಕ್ಷೇತ್ರದಿಂದ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸಂಗಪ್ಪ ಸವದಿ 122 ಮತ, ರಾಯಭಾಗ ಕ್ಷೇತ್ರದಿಂದ ಅಣ್ಣಾಸಾಹೇಬ ಮಾರುತಿ ಕುಲಗುಡೆ 120ಮತ, ಹಾಗೂ ಬಸನಗೌಡ ಮಲಗೌಡ ಆಸಂಗಿ 64 ಮತಗಳು ಪಡೆದಿದ್ದಾರೆ.
…….
ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ, ಹುಕ್ಕೇರಿ ಕ್ಷೇತ್ರಗಳ ಅಂತಿಮ ಫಲಿತಾಂಶ ಹೈಕೋರ್ಟ್ ಪಡಸಾಲೆಯಲ್ಲಿ ಇರುವುದರಿಂದ ಪ್ರಕಟಗೊಂಡಿಲ್ಲ.



