ಮೈಸೂರು : ಕಂಡ ಕಂಡಲ್ಲೆಲ್ಲ ಬೇಕಾ ಬಿಟ್ಟಿ ಕಸಾ ಬಿಸಾಡುತ್ತಿದ್ದೀರಾ? ಎಚ್ಚರ… ಎಚ್ಚರ..! ಕಸ ಬಿಸಾಡುವ ಸ್ಥಳದಲ್ಲೀಗ ಎಐ ಕ್ಯಾಮೆರಾಗಳ ಕಣ್ಗಾವಲಿದೆ. ಕಸ ಬಿಸಾಡಲು ಹೋದರೆ ಎಐ ಕ್ಯಾಮೆರಾ ದೃಶ್ಯ ಸೆರೆ ಹಿಡಿದು ವಾಯ್ಸ್ ಮೂಲಕ ಎಚ್ಚರಿಕೆ ನೀಡಲಿವೆ. ಎಚ್ಚರಿಕೆ ಲೆಕ್ಕಿಸದೆ ಕಸ ಹಾಕಿದರೆ ದಂಡ ತೆತ್ತಬೇಕಾಗಲಿದೆ ಹುಷಾರ್..!
ಮೈಸೂರು ಮಹಾನಗರ ಪಾಲಿಕೆ ಸ್ವಚ್ಛ ನಗರಿ ಕಲ್ಪನೆಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ತಪ್ಪಿಸಲು ನೂತನ ಪ್ರಯೋಗಕ್ಕೆ ಮುಂದಾಗಿದೆ. ಮೈಸೂರು ನಗರ ವ್ಯಾಪ್ತಿಯಲ್ಲಿ 53 ಸ್ಥಳಗಳನ್ನು ಗುರುತಿಸಿ ಎಐ ಕ್ಯಾಮೆರಾ ಅಳವಡಿಸಲಾಗುತ್ತಿದ್ದು, ಈಗಾಗಲೇ 46 ಸ್ಥಳಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಬೇಕಾಬಿಟ್ಟಿ ತ್ಯಾಜ್ಯ ಸುರಿಯುವವರು ಈಗ ಎಚ್ಚತ್ತಿದ್ದು ಕಸ ಹಾಕುವವರ ಸಂಖ್ಯೆಯೂ ಕಡಿಮೆ ಆಗಿದೆ ಎನ್ನುತ್ತಿದ್ದಾರೆ ಪಾಲಿಕೆ ಅಧಿಕಾರಿಗಳು.
ಪಾಲಿಕೆ ಅತ್ಯಾಧುನಿಕ ಎಐ ಕ್ಯಾಮೆರಾ ಅಳವಡಿಕೆ ಜೊತೆಗೆ ವಾಣಿವಿಲಾಸ ವಾಟರ್ ವರ್ಕ್ ಆವರಣದಲ್ಲಿ ನಿಯಂತ್ರಣ ಕೊಠಡಿ ಆರಂಭಿಸಿ ಅಲ್ಲಿಂದಲೆ ನಿಯಂತ್ರಣ ಮಾಡಲಿದ್ದಾರೆ. ಈಗಾಗಲೇ ವಾಣಿ ವಿಲಾಸ ವಾಟರ್ ವರ್ಕ್ಸ್ ಆವರಣದಲ್ಲಿ ನಿಯಂತ್ರಣ ಕೊಠಡಿ ಸಿದ್ಧಗೊಳ್ಳುತ್ತಿದ್ದು, ಎಲ್ಲಾ ತಂತ್ರಾಂಶಗಳ ಅಳವಡಿಕೆ ನಂತರ ವೀಕ್ಷಕರನ್ನು ನೇಮಕ ಮಾಡಿ ಅಲ್ಲಿಂದಲೇ ಎಐ ಧ್ವನಿವರ್ಧಕದ ಮೂಲಕ ಎಚ್ಚರಿಕೆ ಸಂದೇಶ ನೀಡಲಿದ್ದಾರೆ. ಜೊತೆಗೆ ಎಚ್ಚರಿಕೆ ಮೀರಿ ಕಸ ಹಾಕಿದರೆ ಅಂತಹ ವ್ಯಕ್ತಿಗಳ ಪೋಟೊ ಆಧರಿಸಿ ಅವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಸ ಸುರಿದವರ ಮನೆ ಮುಂದೆಯೇ ಕಸವನ್ನು ವಾಪಸ್ ತೆಗೆದುಕೊಂಡು ಹೋಗಿ ಸುರಿದಿದ್ದರು. ಆದರೆ ಆ ಮಾರ್ಗವನ್ನು ಬಿಟ್ಟು ಸಾಂಸ್ಕೃತಿಕ ನಗರಿ ಎಂಬ ಖ್ಯಾತಿಗೆ ಧಕ್ಕೆ ಬರದಂತೆ ಸುಸಂಸ್ಕೃತ ರೀತಿಯಲ್ಲಿಈ ವಿಧಾನವನ್ನು ಪಾಲಿಕೆ ಅಳವಡಿಸಿಕೊಂಡಿದೆ. ಪಾಲಿಕೆ ಗುರುತಿಸಿರುವ ಇನ್ನು ಕೆಲ ಕಡೆಗಳಲ್ಲಿ ಹಂತ ಹಂತವಾಗಿ ಎಐ ಕ್ಯಾಮೆರಾ ಅಳವಡಿಸಲಿದೆ. ಈ ಮೂಲಕ ಜನರಿಗೆ ಜಾಗೃತಿ ಮೂಡಿಸಿ ಸ್ವಚ್ಛ ಸುಂದರ ನಗರವನ್ನಾಗಿ ಮಾಡಲು ಪಾಲಿಕೆ ಪಣತೊಟ್ಟಿದೆ.

ಎಐ ಕ್ಯಾಮೆರಾ ಕಾರ್ಯ ನಿರ್ವಹಿಸುವ ಬಗೆ :
ಎಐ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವ ಕ್ಯಾಮರಾಗಳು 15 ರಿಂದ 20 ಮೀಟರ್ ಪರಿಮಿತಿಯಲ್ಲಿ ಚಲಿಸುವ ವಾಹನಗಳು ಹಾಗೂ ಮನುಷ್ಯರನ್ನು ಗುರುತಿಸಿ ಸಂದೇಶ ರವಾನೆ ಮಾಡುತ್ತದೆ. ಸೋಲಾರ್ ಶಕ್ತಿಯಿಂದ ಕಾರ್ಯನಿರ್ವಹಿಸುವ ಸಿಸಿ ಕ್ಯಾಮೆರಾಗಳು 360 ಡಿಗ್ರಿ ಪರಿಮಿತಿಯಲ್ಲಿ ವಿಡಿಯೋ ಚಿತ್ರಿಕರಿಸಲಿವೆ. ಸೆನ್ಸಾರ್ ಮೂಲಕ ಕಸ ಹಾಕಲು ಬಂದಾಗ ಬಿಪ್ ಶಬ್ಧ ಮೂಲಕ ಸಂದೇಶ ರವಾನೆ ಮಾಡುತ್ತದೆ. ನಿಯಂತ್ರಣ ಕೊಠಡಿಯಿಂದ ವೀಕ್ಷಿಸುವ ಸಿಬ್ಬಂದಿ ಕಸ ಹಾಕದಂತೆ ಮೈಕ್ ಮೂಲಕ ಎಚ್ಚರಿಸುತ್ತಾರೆ.



