ಬೆಂಗಳೂರು : ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೇ ಸ್ನೇಹಮಯಿಕೃಷ್ಣ ಆರೋಪಿಸಿದ್ದರು. ಶಾಲಿನಿ ರಜನೀಶ್ ವಿರುದ್ಧ 1.60 ಕೋಟಿ ರೂ ಲಂಚದ ಆರೋಪ ಮಾಡಿದ್ದರು. ಮುಡಾ ಮಾಜಿ ಆಯುಕ್ತ ನಟೇಶ್ ಸಿಎಸ್ಗೆ ಲಂಚ ಕೊಟ್ಟು ಮುಂಬಡ್ತಿ ಪಡೆದಿದ್ದಾರೆಂದು ಆರೋಪಿಸಿದ್ದು ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಆದರೆ 23 ಗಂಟೆಗೂ ಹೆಚ್ಚು ಕಾಲ ಸಿಸಿಬಿ ವಿಚಾರಣೆ ಬಳಿಕ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ಉಲ್ಟಾ ಹೊಡೆದಿದ್ದಾರೆ.
ನಿನ್ನೆಯಷ್ಟೇ ದೂರುದಾರ ಸ್ನೇಹಮಯಿ ಕೃಷ್ಣರನ್ನ ವಶಕ್ಕೆ ಪಡೆದು ಸಿಸಿಬಿ ತೀವ್ರ ವಿಚಾರಣೆ ಮಾಡಿತ್ತು. ಆಡಿಯೋವನ್ನ ಕೋರ್ಟ್ಗೂ ಸಲ್ಲಿಕೆ ಮಾಡೋಕೂ ಸಜ್ಜಾಗಿದ್ದರು. ಆದರೆ ಕೋರ್ಟ್ಗೆ ಸಲ್ಲಿಸೋಕೆ ಮುಂದಾಗ್ತಿದ್ದಂತೆಯೇ ಸಿಸಿಬಿ ವಶಕ್ಕೆ ಪಡೆದಿತ್ತು. ಜೊತೆಗೆ ಮೈಸೂರಿನ 2 ಮನೆ, ಒಂದು ಕಚೇರಿ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಕೆಲವು ಪ್ರಮುಖ ದಾಖಲೆಗಳನ್ನ ಸೀಜ್ ಮಾಡಿದ್ದರು.
ಇದೀಗ ಸಿಸಿಬಿ ವಿಚಾರಣೆ ಬಳಿಕ ತಪ್ಪೊಪ್ಪಿಕೊಂಡಿರೋ ಸ್ನೇಹಮಯಿ ಕೃಷ್ಣ, ಆಡಿಯೋ ನಿಜ, ಆದರೆ ಶಾಲಿನಿ ರಜನೀಶ್ ವಿರುದ್ಧದ ಆರೋಪ ಸುಳ್ಳು ಅಂದಿದ್ದಾರೆ. ಮುಡಾ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ.
ಮುಡಾ ಕೇಸ್ಗೂ ಇದಕ್ಕೂ ಸಂಬಂಧ ಇಲ್ಲ ಅಂತಿರೋ ದೂರುದಾರ ಸ್ನೇಹಮಯಿ ಕೃಷ್ಣ, ಮುಡಾ ಮಾಜಿ ಆಯುಕ್ತ ನಟೇಶ್ ವಿರುದ್ಧ ನನ್ನ ಆರೋಪ ಸರಿಯಾಗೇ ಇದೆ ಅಂತಿದ್ದಾರೆ. ನಟೇಶ್, ವಿನೋದ್ ಮಧ್ಯೆ ಹಣಕಾಸಿನ ವಿಚಾರ ನಡೆದಿತ್ತು. ಇದರಲ್ಲಿ ನನ್ನನ್ನೂ ಬಳಸಿಕೊಳ್ಳೋ ಪ್ರಯತ್ನ ಆಗಿತ್ತು ಅಂದಿದ್ದಾರೆ.
ಶಾಲಿನಿ ರಜನೀಶ್ಗೆ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ
ಸ್ನೇಹಮಯಿ ಕೃಷ್ಣ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ವಿನೋದ್ ಮತ್ತು ನಟೇಶ್ ನಡುವಿನ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಆಡಿಯೋದಲ್ಲಿ, ಶಾಲಿನಿ ರಜನೀಶ್ ಅವರ ಬಗ್ಗೆ ನೀಡಲಾದ ಮಾಹಿತಿ ಸುಳ್ಳು ಎಂದು ಅವರು ಒಪ್ಪಿಕೊಂಡಿದ್ದಾರೆ. ಹೀಗಾಗಿ ತಮ್ಮ ತಪ್ಪಿಗಾಗಿ ಶಾಲಿನಿ ರಜನೀಶ್ಗೆ ಕ್ಷಮೆ ಕೋರಿದ್ದಾರೆ.
ಇನ್ನು ಶಾಲಿನಿ ರಜನೀಶ್ ವಿರುದ್ಧ ಆರೋಪದಲ್ಲಿ ಕೋರ್ಟ್ಗೆ ಸಾಕ್ಷಿ ಸಲ್ಲಿಕೆಯಾಗೋದನ್ನ ತಪ್ಪಿಸೋ ಹುನ್ನಾರ ನಡೀತಾ? ಅನ್ನೋ ಅನುಮಾನವೂ ಇದೆ. ಇಂದು ಜನಪ್ರತಿನಿಧಿಗಳ ಕೋರ್ಟ್ಗೆ ನಟೇಶ್ ಮಾತನಾಡಿದ್ದ ಆಡಿಯೋ ಸಲ್ಲಿಕೆಗೂ ಮುಂದಾಗಿದ್ದರು. ಆದರೆ ಕೋರ್ಟ್ಗೆ ಆಡಿಯೋ ಸಲ್ಲಿಕೆಗೂ ಮುನ್ನವೇ ಸ್ನೇಹಮಯಿಯನ್ನ ವಶಕ್ಕೆ ಪಡೆದಿರೋದು ಹಲವು ಅನುಮಾನಕ್ಕೂ ಕಾರಣವಾಗಿತ್ತು.
ಇನ್ನು ಕೇಸ್ ಇಲ್ಲಿಗೆ ಮುಗೀತಾ? ಇಲ್ಲ, ಆಡಿಯೋ ಮಾಡಿದ್ದ ವಿನೋದ್ನನ್ನ ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ. ಹಣಕಾಸು ವಿಚಾರದಲ್ಲಿ ನಟೇಶ್ ಮಾತನಾಡಿದ್ದ ಆಡಿಯೋವನ್ನ ಪರಿಶೀಲನೆ ಮಾಡಲಾಗುತ್ತಿದೆ. ಸ್ನೇಹಮಯಿ ವಶದ ವಿಚಾರದಲ್ಲಿ ಸಿಎಂ ಸೇರಿ ಹಲವರ ಕೈವಾಡ ಇದೆ ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ಇದಕ್ಕೆ ತಿರುಗೇಟು ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲದನ್ನೂ ದ್ವೇಷ ಅನ್ನೋದು ಸರಿಯಲ್ಲ ಎಂದಿದ್ದಾರೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗುತ್ತೆ ಅಂತಾ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಒಟ್ಟಿನಲ್ಲಿ ಶಾಲಿನಿ ರಜನೀಶ್ ವಿರುದ್ಧ ನನ್ನ ಆರೋಪ ಸುಳ್ಳು ಅಂತಾ ಸ್ನೇಹಮಯಿ ಕೃಷ್ಣ ಇದೀಗ ಉಲ್ಟಾ ಹೊಡೆದಿದ್ದಾರೆ. ಆದರೆ ಮುಡಾ ಮಾಜಿ ಆಯುಕ್ತ ನಟೇಶ್ ಆಡಿಯೋದ ಬಗ್ಗೆ ಸಿಸಿಬಿ ತನಿಖೆ ಮುಂದುವರಿದಿದೆ.



