ಮಂಗಳೂರು: ಮಂಗಳೂರಿನ ಖಾಸಗಿ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜ.12ರಂದು ವಿವೇಕಾನಂದ ಕಾಲೇಜಿನ ಅವರಣದಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಹದಿ ಹರೆಯದ ಬಾಲಕ ಬಾಲಕಿಯರು ಭಾಗವಹಿಸಿದ್ದ ಸಭೆಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆಂದು ಪುತ್ತೂರು ನಿವಾಸಿ ರಾಮಚಂದ್ರ.ಕೆ ಎಂಬುವವರು ದೂರು ನೀಡಿದ್ದಾರೆ.
ಈ ದ್ವೇಷ ಭಾಷಣದಲ್ಲಿ ಮುಸಲ್ಮಾನರ ಮತ್ತು ಕ್ರೈಸ್ತರ ಮೇಲೆ ಹಿಂಸೆ ಮಾಡಲು ಪ್ರಚೋದಿಸುವಂತಿದ್ದು, ಅಲ್ಲಿ ಸೇರಿರುವ ಸಭಾಸದರಿಗೆ, ಅದರಲ್ಲೂ ಮುಖ್ಯವಾಗಿ ಎಳೆಯ ಪ್ರಾಯದ ವಿದ್ಯಾರ್ಥಿಗಳಿಗೆ ಹಾಗೂ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಿದ ಸಾವಿರಾರು ಜನರಿಗೆ ಮುಸಲ್ಮಾನ ಮತ್ತು ಕ್ರೈಸ್ತ ಜನಾಂಗದ ಮೇಲೆ ದ್ವೇಷ ಹುಟ್ಟುವಂತೆ ದ್ವೇಷ ಭಾಷಣ ಮಾಡಿ, ಹಿಂಸೆಯನ್ನು ಪ್ರಚೋದಿಸಿರುತ್ತಾರೆ.
ಅಲ್ಲದೆ ದ್ವೇಷ ಭಾಷಣ ಮಾಡದಂತೆ ನ್ಯಾಯಾಲಯ ಷರತ್ತು ವಿಧಿಸಿದ್ದರೂ, ಅದನ್ನು ಉಲ್ಲಂಘಿಸಿ, ಈಗ ಮತ್ತೆ ದ್ವೇಷ ಭಾಷಣ ಮಾಡುವುದರ ಮೂಲಕ ಸಮಾಜದಲ್ಲಿ ದ್ವೇಷ, ಮತ್ತು ಹಿಂಸೆಯನ್ನು ಪ್ರೇರೇಪಿಸುವ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದ್ವೇಷ ಭಾಷಣ ಮಾಡಿದ ಡಾ.ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮತ್ತು ಈ ದ್ವೇಷ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ಮೇಲೆಯೂ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ದೂರು ಹಿನ್ನೆಲೆಯಲ್ಲಿ ದ್ವೇಷ ಭಾಷಣ ಮಾಡಿದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಈ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ಮತ್ತು ಕಾರ್ಯಕ್ರಮವನ್ನು ಆಯೋಜಕರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.



