Saturday, July 4, 2026
Google search engine

Homeಅಪರಾಧಅಯೋಧ್ಯೆ ಬೆನ್ನಲ್ಲೇ ಬದರಿನಾಥ ಧಾಮದಲ್ಲಿ ಕಾಣಿಕೆ ದುರುಪಯೋಗ ಆರೋಪ : ತನಿಖೆಗೆ ಬಿಕೆಟಿಸಿ ಆದೇಶ

ಅಯೋಧ್ಯೆ ಬೆನ್ನಲ್ಲೇ ಬದರಿನಾಥ ಧಾಮದಲ್ಲಿ ಕಾಣಿಕೆ ದುರುಪಯೋಗ ಆರೋಪ : ತನಿಖೆಗೆ ಬಿಕೆಟಿಸಿ ಆದೇಶ

ಡೆಹ್ರಾಡೂನ್ : ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಆರೋಪದ ಬೆನ್ನಲ್ಲೇ ಇದೀಗ ಬದರಿನಾಥ ಧಾಮದಲ್ಲೂ ಕಾಣಿಕೆ ದುರುಪಯೋಗವಾಗಿರುವ ಆರೋಪ ಕೇಳಿಬಂದಿದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ (BKTC) ಪ್ರಕರಣದ ತನಿಖೆಗೆ ವಿಶೇಷ ಸಮಿತಿ ರಚಿಸಲು ಆದೇಶಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವರಿಂದ ಸ್ಪಷ್ಟನೆ ಕೇಳಲಾಗಿದೆ. ಇದೇ ವೇಳೆ, ಆರೋಪ ಎದುರಿಸುತ್ತಿರುವ ವ್ಯಕ್ತಿ ತಮ್ಮ ವೈಯಕ್ತಿಕ ಕಾರ್ಯದರ್ಶಿ ಎಂಬ ಮಾತನ್ನು ಹೇಮಂತ್ ದ್ವಿವೇದಿ ತಳ್ಳಿಹಾಕಿದ್ದಾರೆ. ಆರೋಪ ಎದುರಿಸುತ್ತಿರುವ ವ್ಯಕ್ತಿ ತಮ್ಮ ವೈಯಕ್ತಿಕ ಕಾರ್ಯದರ್ಶಿಯಲ್ಲ, ದೇವಸ್ಥಾನ ಸಮಿತಿಯ ಸಾಮಾನ್ಯ ನೌಕರ ಎಂದು ಸ್ಪಷ್ಟಪಡಿಸಿದ್ದಾರೆ.

ಬಳಿಕ ಬಿಕೆಟಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ್ ಸಿಂಗ್ ರಂಗದ್ ಮಾತನಾಡಿ, ತನಿಖೆಯಲ್ಲಿ ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಯಾವುದೇ ಮೃದು ಧೋರಣೆ ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಲಭ್ಯವಿರುವ ದಾಖಲೆಗಳು ಹಾಗೂ ಸಂಬಂಧಪಟ್ಟವರ ಹೇಳಿಕೆಗಳ ಆಧಾರದ ಮೇಲೆ ತನಿಖಾ ಸಮಿತಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.

ತನಿಖೆಯಲ್ಲಿ ಯಾವುದೇ ಅಕ್ರಮ ದೃಢಪಟ್ಟರೆ, ‘ಶ್ರೀ ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಕಾಯ್ದೆ, 1939’ ಹಾಗೂ ನೌಕರರ ನಡವಳಿಕೆ ನಿಯಮಗಳ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ತನಿಖೆ ಪೂರ್ಣಗೊಳ್ಳುವವರೆಗೆ ವದಂತಿಗಳು ಅಥವಾ ಪರಿಶೀಲಿಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular