ಯಳಂದೂರು: ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆಯುವ ಪ್ರಸಿದ್ಧ ಚಾಮುಂಡೇಶ್ವರಿ ಹಬ್ಬದ ನಿಮಿತ್ತ ಭಾನುವಾರ ಸಂಜೆ ನಡೆದ ಚಾಮುಂಡೇಶ್ವರಿ ಕೊಂಡೋತ್ಸವದಲ್ಲಿ ಕೊಂಡ ಹಾಯುತ್ತಿದ್ದ ೧೪ ಕ್ಕೂ ಹೆಚ್ಚು ಮಂದಿ ಭಕ್ತರ ಕಾಲಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಗಾಯಗೊಂಡಿರುವ ವ್ಯಕ್ತಿಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಬಳೆ ಗ್ರಾಮದಲ್ಲಿ ಪ್ರತಿ ವರ್ಷವೂ ಚಾಮುಂಡೇಶ್ವರಿ ಹಬ್ಬವನ್ನು ಒಂದು ತಿಂಗಳ ಕಾಲ ಆಚರಿಸುವ ವಾಡಿಕೆ ಇದೆ. ಎಲ್ಲಾ ಜನಾಂಗದವರೂ ಸೇರಿ ಆಚರಿಸುವ ಹಬ್ಬ ಇದಾಗಿದೆ. ಇಲ್ಲಿನ ಚಾಮುಂಡೇಶ್ವರಿ ದೇಗುಲದಲ್ಲಿ ಹಬ್ಬದ ಒಂದು ಭಾಗವಾಗಿ ಕೊಂಡೋತ್ಸವವೂ ನಡೆಯುತ್ತದೆ. ಭಾನುವಾರ ಕೊಂಡಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ದೇವರನ್ನು ಮೆರವಣಿಗೆಯಲ್ಲಿ ಹೊತ್ತು ಸಾಗುತ್ತಿದ್ದ ಕೆಲವರು ಕೊಂಡದ ಬೆಂಕಿಯನ್ನು ಹಾದಿದ್ದಾರೆ. ನಂತರ ಹರಕೆ ಹೊತ್ತ ಭಕ್ತರೂ ಸಹ ಇಲ್ಲಿ ಕೊಂಡದ ಬೆಂಕಿಯನ್ನು ಹಾಯುತ್ತಾರೆ. ಆದರೆ ಹಾಯುವಾಗ ಹಲವರ ಕಾಲಿಗೆ ಗಾಯವಾಗಿದೆ. ಇದರಲ್ಲಿ ತೀವೃವಾಗಿ ಗಾಯಗೊಂಡ ಪ್ರಕಾಶ್, ನಂದ, ಚೇತನ್, ಯಶ್ವಂತ್, ನಾರಾಯಣಸ್ವಾಮಿ, ಚಿಕ್ಕಮಹದೇವ ಸೇರಿದಂತೆ ಹಲವರ ಕಾಲು ಕೊಂಡದ ಬೆಂಕಿಯಿಂದ ಸುಟ್ಟಿದೆ. ಗಾಯಗೊಂಡ ಇವರನ್ನು ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ.