ಕೆ.ಆರ್.ಪೇಟೆ: ಕರ್ನಾಟಕದಲ್ಲಿ ಅಮಿತ್ ಶಾ ಅವರ ಸ್ಟ್ರ್ಯಾಟರ್ಜಿ ಏನೂ ವರ್ಕ್ ಔಟ್ ಆಗಲ್ಲ. ರಾಷ್ಟ್ರದಲ್ಲಿ ಏನಾಗುತ್ತೆ ಕಾದು ನೋಡೋಣ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಮೈಸೂರು ಪ್ರವಾಸ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ರಾಷ್ಟ್ರದ ಜನ ಏನ್ಮಾಡ್ತಿದ್ದಾರೆ, ಏನ್ ಪರಿಸ್ಥಿತಿ ಇದೆ. ರಾಜ್ಯದ ಜನ ಏನು ಕೇಳ್ತಿದ್ದಾರೆ, ಏನು ಕೊಡಬೇಕು ಅದೆಲ್ಲ ಮುಖ್ಯವಲ್ಲ. ಅವರದ್ದು ಬರೀ ಸ್ಟ್ರ್ಯಾಟರ್ಜಿ ಮಾಡೋದು ಅಷ್ಟೇ. ಪ್ರಧಾನಮಂತ್ರಿಗಳು ಪ್ರಪಂಚ ಸುತ್ತೋದು, ಇವರು ಸ್ಟ್ರ್ಯಾಟರ್ಜಿ ಮಾಡೋದು ಅಷ್ಟೇ ಅವರಿಗೆ ಗೊತ್ತಿರೋದು ಎಂದರು.
ಪಾಪ ಅವರಿಗೆ ಒಳ್ಳೆಯದಾಗಲಿ. ಹಣೆಬರಹ ಚೆನ್ನಾಗಿದ್ದಾಗ ನಡೆದುಕೊಂಡು ಹೋಗುತ್ತೆ. ಯಾವಾಗಾದ್ರೂ ಒಂದು ದಿನ ಎಂಡ್ ಆಗಬೇಕಲ್ವ? ನೋಡೋಣ ಎಷ್ಟು ದಿನ ಮಾಡ್ತಾರೆ ಸ್ಟ್ರ್ಯಾಟರ್ಜಿ ಮಾಡ್ಕೊಂಡ್ ಹೋಗ್ಲಿ ಎಂದು ತಿಳಿಸಿದರು.
ಇಂದಿನಿಂದ ಬಜೆಟ್ ಅಧಿವೇಶನ ವಿಚಾರವಾಗಿ ಮಾತನಾಡಿ, ನಮ್ಮದು ಕೇಂದ್ರ ಸರ್ಕಾರದ ತರ ಬಜೆಟ್ ಅಲ್ಲ. ನಮ್ಮ ರಾಜ್ಯ ಸರ್ಕಾರದ ಬಜೆಟ್ 7 ಕೋಟಿ ಜನರಿಗೂ ಉತ್ತಮ ಬಜೆಟ್ ಆಗಿರಲಿದೆ. ಸಿದ್ದರಾಮಯ್ಯರ ಬಜೆಟ್ ಜನರ ನಿರೀಕ್ಷೆಯ ಬಜೆಟ್ ಆಗಲಿದೆ ಎಂದು ಹೇಳಿದರು.
ಖಂಡಿತ ಜನರ ನಿರೀಕ್ಷೆ ಸಾಕಷ್ಟಿದೆ. ಬಹುಶಃ ಎಲ್ಲ ನಿರೀಕ್ಷೆಯನ್ನ ಒಂದೇ ಸಲ ಫುಲ್ ಫಿಲ್ ಮಾಡೋಕೆ ಆಗಲ್ಲ. ಇನ್ನೂ 4 ವರ್ಷದಲ್ಲಿ ಎಲ್ಲವನ್ನೂ ಹಂತ ಹಂತವಾಗಿ ಈಡೇರಿಸ್ತೇವೆ. ಮಂಡ್ಯ ಜನರೂ ಮೆಚ್ಚುವ, ಉತ್ತಮ ಬಜೆಟ್ ಕೊಡ್ತೀವಿ ಎಂದರು.
ಬಿಜೆಪಿ ಸರ್ಕಾರದ ಬೇಜವಾಬ್ದಾರಿತನದಿಂದ ರಾಜ್ಯದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿದೆ. ಹಿಂದಿನ ಸರ್ಕಾರ ಬರೋಬ್ಬರಿ 2ಲಕ್ಷದ 40 ಸಾವಿರ ಕೋಟಿ ಬಾಕಿ ಬಿಟ್ಟುಹೋಗಿದೆ ಎಂದು ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಸಚಿವ ಎನ್.ಚಲುವರಾಯಸ್ವಾಮಿ ಬಿಚ್ಚಿಟ್ಟರು.
ವಿವಿಧ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರಿಗೆ ಕೊಡಬೇಕಿರುವ ಬಾಕಿ ಹಣ 2 ಲಕ್ಷದ 40 ಸಾವಿರ ಕೋಟಿ. ಚುನಾವಣೆ ಸಮಯ ಅಂತೇಳಿ ಬೇಕಾಬಿಟ್ಟಿ ಕೆಲಸ ಮಾಡಿ ಹೋಗಿದ್ದಾರೆ. ಅದರ ಪರಿಣಾಮ ಸರ್ಕಾರದ ಆರ್ಥಿಕತೆ ಮೇಲೆ ಬಿದ್ದಿದೆ. ಹಿಂದಿನ ಸರ್ಕಾರದ ನಡೆಯಿಂದ ಇವತ್ತು ಸಮಸ್ಯೆ ಎದುರಿಸಬೇಕಾಗಿದೆ. ಈ ರೀತಿ ಆದರೆ ಆರ್ಥಿಕ ಇಲಾಖೆ ಸದೃಢ ಮಾಡಲು ಸಾಧ್ಯವಾಗಲ್ಲ ಎಂದರು.
ಐಚನಹಳ್ಳಿ ಏತ ನೀರಾವರಿ ಯೋಜನೆ 250 ಕೋಟಿ ಮೊತ್ತದ್ದು. ಈ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಹಿಂದಿನ ಸರ್ಕಾರ ಕೊಟ್ಟಿರೋದು ಬರೀ 25 ಕೋಟಿ ಅಷ್ಟೇ. ಗುತ್ತಿಗೆದಾರರಿಗೆ ಇನ್ನೂ 125 ಕೋಟಿ ಬಾಕಿ ಕೊಡಬೇಕಿದೆ. ರಾಜ್ಯದಲ್ಲಿ ಅಮೃತ್ ಕನ್ಷ್ಟ್ರಕ್ಷನ್ ಒಂದಕ್ಕೇ 3 ಸಾವಿರ ಕೋಟಿಗೂ ಹೆಚ್ಚು ಬಾಕಿ ಕೊಡಬೇಕಿದೆ. ಈ ಎಲ್ಲಾ ಬಾಕಿ ಮೊತ್ತ ಬಿಡುಗಡೆ ಮಾಡುವ ಹೊರೆ ನಮ್ಮ ಸರ್ಕಾರದ ಮೇಲೆ ಬಿದ್ದಿದೆ ಎಂದು ಸರ್ಕಾರದ ಆರ್ಥಿಕ ಪರಿಸ್ಥಿತಿ, ಗುತ್ತಿಗೆದಾರರ ಸಮಸ್ಯೆ ಬಿಚ್ಚಿಟ್ಟರು.