ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಅಮೃತಾ ಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡಗೆ ಜಾಮೀನು ಸಿಕ್ಕಿದೆ. ಮಂಗಳೂರಿನಲ್ಲಿ ಸ್ಥಳ ಮಹಜರು ಮುಗಿಸಿ ಇಂದು (ಜನವರಿ 30) ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ವೇಳೆ ಶಿಡ್ಲಘಟ್ಟದ ಜೆಎಂಎಫ್ಸಿ ಕೋರ್ಟ್, ರಾಜೀವ್ ಗೌಡನಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ. 50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್, ಪೊಲೀಸರ ತನಿಖೆಗೆ ಸಹಕರಿಸಲು ಸೂಚನೆ ನೀಡಿದೆ. ಅಲ್ಲದೇ ಪ್ರಮುಖವಾಗಿ ಜಾಮೀನು ಸಿಕ್ಕ ಖುಷಿಯಲ್ಲಿ ಪಟಾಕಿ ಹಚ್ಚಿ, ಸಂಭ್ರಮಾಚರಣೆ ಮಾಡದಂತೆ ಜಡ್ಜ್ ಮೊಹಮ್ಮದ್ ರೋಷನ್ ಶಾ ತಾಕೀತು ಮಾಡಿದ್ದಾರೆ.
ಬರೋಬ್ಬರಿ 14ದಿನಗಳ ಬಳಿಕ ಕೇರಳ ಗಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ರಾಜೀವ್ ಗೌಡನಿಗೆ ಕೋರ್ಟ್ ಮೊದಲು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಸ್ಥಳ ಮಹಜರು ಮಾಡಿ ತನಿಖೆ ಮಾಡಬೇಕಿದೆ. ಹೀಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದು, ಇದರ ಮೇರೆಗೆ ಕೋರ್ಟ್ ಎರಡು ದಿನ ರಾಜೀವ್ ಗೌಡನನ್ನು ಪೊಲಿಸ್ ಕಸ್ಟಡಿಗೆ ನೀಡಿತ್ತು. ಬಳಿಕ ಪೊಲೀಸರು ರಾಜೀವ್ ಗೌಡನನ್ನು ಮಂಗಳೂರಿಗೆ ಕರೆದೊಯ್ದು ಎರಡು ದಿನ ಸ್ಥಳ ಮಹಜರು ಮಾಡಿದ್ದು, ಇಂದು (ಜನವರಿ 30) ಕಸ್ಟಡಿ ಅಂತ್ಯವಾಗಿದ್ದರಿಂದ ರಾಜೀವ್ ಗೌಡನನ್ನು ಶಿಡ್ಲಘಟ್ಟ ಜಿಎಂಎಫ್ ಕೋರ್ಟ್ಗೆ ಹಾಜರುಪಡಿಸಿದರು. ಮತ್ತೊಂದೆಡೆ ರಾಜೀವ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ಪುರಸ್ಕರಿದ್ದು, ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿದೆ.
ಬ್ಯಾನರ್ ತೆರವು ಮಾಡಿದ ವಿಚಾರವಾಗಿ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡಗೆ ಫೋನ್ನಲ್ಲಿ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅಷ್ಟೇ ಅಲ್ಲದೇ ಜೀವ ಬೆದರಿಕೆ ಸಹ ಹಾಕಿದ್ದ. ಈ ಘಟನೆ ಸಂಬಂಧ ಅಮೃತಾ ಅವರು ನೀಡಿದ್ದ ದೂರಿನೆ ಮೇರೆಗೆ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಆರೋಪಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಇತ್ತ ಪೊಲೀಸರು ಸಹ ಮನೆಗೆ ತೆರಳಿ ನೋಟಿಸ್ ನೀಡಿ ಎಲ್ಲೆಡೆ ಹುಡುಕಾಡಿದ್ದರು. ಕೊನೆಗೆ 14 ದಿನದ ಬಳಿಕ ಮಂಗಳೂರಿನ ಉದ್ಯಮಿಯೊಬ್ಬರ ಆಶ್ರಯದಲ್ಲಿದ್ದ ರಾಜೀವ್ ಗೌಡ ಕೇರಳ ಗಡಿಭಾಗದಲ್ಲಿ ಸಿಕ್ಕಿಬಿದ್ದಿದ್ದ.



