ಶ್ರೀನಗರ: ಜಮ್ಮು-ಕಾಶ್ಮೀರದ ಛತ್ರೂ ಪ್ರದೇಶದಲ್ಲಿ 12,000 ಅಡಿ ಎತ್ತರದಲ್ಲಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಭೂಗತ ಅಡಗು ತಾಣವೊಂದು ಪತ್ತೆಯಾಗಿದೆ.
ಜೈಶ್ ಉಗ್ರರ ಹೆಡೆಮುರಿ ಕಟ್ಟುವ ಉದ್ದೇಶದಿಂದ ಆಪರೇಷನ್ ತ್ರಾಶಿ-I ಕಾರ್ಯಾಚರಣೆಯ ಭಾಗವಾಗಿ ಭದ್ರತಾ ಪಡೆಗಳು ಛತ್ರೂ ಪ್ರದೇಶದ ಕಿಶ್ತ್ವಾರ್‌ನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದವು. ಈ ವೇಳೆ 12,000 ಅಡಿ ಎತ್ತರದಲ್ಲಿದ್ದ ಅಡಗು ತಾಣ ಪತ್ತೆಯಾಗಿದೆ.

ಅನೇಕ ಕಡೆ ಎಂಟ್ರಿ, ಎಕ್ಸಿಟ್‌ಗಳನ್ನ ಹೊಂದಿರುವ ಈ ಅಡಗು ತಾಣದಲ್ಲಿ ಏಕಕಾಲಕ್ಕೆ ನಾಲ್ವರು ಅಡಗಿಕೊಳ್ಳುವ ಮತ್ತು ತಪ್ಪಿಸಿಕೊಳ್ಳುವಷ್ಟು ದೊಡ್ಡದಿದೆ. ಹಲವು ದಿನಗಳಿಂದ ಇಲ್ಲಿ ಉಗ್ರರು ಸಕ್ರೀಯರಾಗಿದ್ದರು ಅನ್ನೋದಕ್ಕೆ ಸಾಕ್ಷಿಗಳು ಸಿಕ್ಕಿವೆ. ಉಗ್ರರು ಅಗತ್ಯಕ್ಕಾಗಿ ಸಂಗ್ರಹಿಸಿದ್ದ ಆಹಾರ, ಅಡುಗೆ ಅನಿಲ, ದೇಸಿ ತುಪ್ಪ, ಧಾನ್ಯಗಳು ಮತ್ತು ಕಂಬಳಿಯಂತಹ ಅಗತ್ಯ ವಸ್ತುಗಳು ಪತ್ತೆಯಾಗಿವೆ.
ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಭದ್ರತಾ ಪಡೆಗಳು ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ಕೈಗೊಂಡಿದ್ದವು. ಈ ವೇಳೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಜವಾನ ಹುತಾತ್ಮನಾದರೆ, ಉಳಿದ 7 ಮಂದಿ ಗಾಯಗೊಂಡಿದ್ದರು.



