ಚಾಮರಾಜನಗರ: ಕನ್ನಡ ಪುಸ್ತಕಗಳನ್ನು ಓದುವಂತೆ ಮಾಡಿದ ಮಹಾನ್ ಸಾಹಿತಿ, ನಾಟಕಕಾರ, ಕಾದಂಬರಿಕಾರ, ಹೋರಾಟಗಾರ, ಭಾಷಣಕಾರರು, ಕನ್ನಡದ ಎಲ್ಲವೂ ಆಗಿದ್ದವರು ಅ ನ ಕೃಷ್ಣರಾಯರು. ಕನ್ನಡ ಭಾಷೆ ನಾಡು, ನುಡಿ ,ಜನತೆ, ಸಂಸ್ಕೃತಿ ಕಟ್ಟುವ ಶ್ರೇಷ್ಠ ಕಾರ್ಯ ಮಾಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಅ ನ ಕೃಷ್ಠರಾಯರ ಜನ್ಮದಿನದ ಅಂಗವಾಗಿ ಮಾತನಾಡುತ್ತ ರಾಯರು ಸುಮಾರು 80,000ಕ್ಕೂ ಹೆಚ್ಚು ಪುಟಗಳಷ್ಟು ಸಾಹಿತ್ಯವನ್ನು ರಚಿಸಿ ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ ಕರ್ನಾಟಕದ ಕಾದಂಬರಿಯ ಸಾರ್ವಭೌಮ ಎಂದೇ ಪ್ರಖ್ಯಾತರಾದವರು. ಕನ್ನಡ ಭಾಷೆಗೆ ಸ್ಥಾನಮಾನ, ಗೌರವ ತಂದವರು. ಕಲೆ, ಸಂಗೀತ ,ಸಿನಿಮಾ ಸಂರಕ್ಷಣೆ ಮಾಡಿದ ಮಹಾನ್ ಹೋರಾಟಗಾರರು ಕೃಷ್ಣರಾಯರು. ಕನ್ನಡ ಸಾಹಿತ್ಯವಲ್ಲದೆ ಸಾಮಾಜಿಕವಾಗಿ ,ಚಾರಿತ್ರಿಕವಾಗಿ ಐತಿಹಾಸಿಕವಾಗಿ ಯೋಚಿಸಿ ಕನ್ನಡ ಸಾಹಿತ್ಯವನ್ನು ಕಾದಂಬರಿಗಳನ್ನು ರಚಿಸಿ ಅಗಾಧವಾದ ಕನ್ನಡ ಭಾಷಾ ಸಂಪತ್ತನ್ನು ಕನ್ನಡಿಗರಿಗೆ ನೀಡಿದವರು. ಹೋರಾಟದ ಕಿಚ್ಚನ್ನು ಹಚ್ಚಿಕೊಂಡ ಆನ ಕೃಷ್ಣರಾಯರು ಕನ್ನಡಕ್ಕಾಗಿ ಹಲವಾರು ಪ್ರತಿಭಟನೆ ಹಾಗೂ ಹೋರಾಟವನ್ನು ನಡೆಸಿ ಕೋಟ್ಯಾಂತರ ಕನ್ನಡಿಗರ ಹಾಗೂ ಹೋರಾಟಗಾರರ ಸ್ಪೂರ್ತಿಯ ಶಕ್ತಿಯಾದವರು. ಕೃಷ್ಣರಾಯರು ಎಂದರೆ ಕನ್ನಡ ವಾಗಿದೆ. ಕೃಷ್ಣರಾಯರ ನೆನಪಿನಲ್ಲಿ ಎಲ್ಲ ಕನ್ನಡ ಹೋರಾಟಗಾರರು ಒಂದೆಡೆ ಕಲೆತು ಸಮಗ್ರ ಕನ್ನಡದ ಅಭಿವೃದ್ಧಿಗೆ ಯೋಚಿಸುವ ಹಾಗು ಕಾರ್ಯಯೋಜನೆ ರೂಪಿಸುವ ಕಾರ್ಯವಾಗಬೇಕು .ಕನ್ನಡ ಸಾಹಿತ್ಯ ಪರಿಷತ್ತು ಆ ದಿಕ್ಕಿನಲ್ಲಿ ಸಮಗ್ರ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗಿದೆ ಎಂದರು.

ಉದ್ಘಾಟನೆಯನ್ನು ಕನ್ನಡ ಹೋರಾಟಗಾರರಾದ ಶ್ರೀನಿವಾಸ್ ಗೌಡರವರು ನೆರವೇರಿಸಿ ಕನ್ನಡಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಆನ ಕೃಷ್ಣರಾಯರು ಕನ್ನಡ ಹೋರಾಟಗಾರರ ಬಹುದೊಡ್ಡ ಶಕ್ತಿ. ಅವರ ಚಿಂತನೆಗಳು ಇಂದು ಮಾದರಿಯಾಗಿದೆ. ಹೋರಾಟಗಾರರಿಗೆ ಸ್ಪೂರ್ತಿ ಹಾಗೂ ಚೈತನ್ಯವನ್ನು ತುಂಬಿದವರು ಎಂದರು .
ಕನ್ನಡ ಹೋರಾಟಗಾರ ಗು . ಪುರುಷೋತ್ತಮ ರವರು ಮಾತನಾಡಿ ಕನ್ನಡಕ್ಕಾಗಿ ನಿರಂತರವಾದ ಹೋರಾಟ ಪ್ರತಿದಿನ ನಡೆಯುತ್ತಿದೆ ಕನ್ನಡದ ಭಾಷೆ ನೆಲ ಜಲ ಸಂರಕ್ಷಣೆಗೆ ನೂರಾರು ಹೋರಾಟಗಾರರು ರಾಜ್ಯದ್ಯಂತ ಇದ್ದಾರೆ. ಅ ನ ಕೃಷ್ಣರಾಯರು, ಮಾ ರಾಮಮೂರ್ತಿ ಕನ್ನಡ ಉಳಿಸುವ ಪ್ರಾರಂಭದ ಶಕ್ತಿಯಾಗಿದ್ದವರು ಎಂದರು.
ಬರಹಗಾರ ಎಸ್ ಲಕ್ಷ್ಮೀನರಸಿಂಹ ಕೃಷ್ಣರಾಯರ ಕಾದಂಬರಿ ಸಂಧ್ಯ ರಾಗ ,ಉದಯರಾಗ, ನಟಸಾರ್ವಭೌಮ ಕುರಿತು ಮಾತನಾಡಿ ಕಾದಂಬರಿಗಳು ಸಾಮಾಜಿಕ ಏಕತೆಯನ್ನು ಹಾಗೂ ಅಂದಿನ ಜ್ವಲಂತ ಸಮಸ್ಯೆಗಳ ಅನಾವರಣ ಮಾಡಿದೆ. ಅವರ ನೂರಾರು ಕಾದಂಬರಿಗಳು ಕನ್ನಡಿಗರ ಮನೆ ಮಾತಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರರಾದ ಗೂ ಪುರುಷೋತ್ತಮರವರಿಗೆ ಅನಕೃ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯ, ಸರಸ್ವತಿ ,ರವಿಚಂದ್ರ ಪ್ರಸಾದ, ಶಿವಲಿಂಗ ಮೂರ್ತಿ, ಪದ್ಮಾ ಪುರುಷೋತ್ತಮ್,ಕನ್ನಡ ಹೋರಾಟಗಾರರಾದ ಪಣ್ಣ್ಯ ದಹುಂಡಿರಾಜು, ಮಹೇಶ್ ಗೌಡ್ರು, ಸುರೇಶ್ ಗೌಡ, ಬೊಮ್ಮಾಯಿ ,ನಿಜದ್ವನಿ ಗೋವಿಂದರಾಜು, ಕೆಂಪನಪುರ ನಾಗರಾಜು ಇದ್ದರು.