ಆನೇಕಲ್: ಬೆಂಗಳೂರು ಹೊರವಲಯದ ತಿರುಪಾಳ್ಯದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಆರೋಪಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂದಿರ ಮಂಡಲ್ (27) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಆರೋಪಿ ಸುಮನ್ ಮಂಡಲ್ (28) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂದಿರ, ಬಿಜೋನ್ ಮಂಡಲ್ ಎಂಬಾತನ ಪತ್ನಿಯಾಗಿದ್ದು, ದಂಪತಿಗೆ ಆರು ವರ್ಷದ ಮಗನಿದ್ದ. ಪತಿ-ಪತ್ನಿ ಕಳೆದ ಎರಡು ವರ್ಷಗಳಿಂದ ಬೇರ್ಪಟ್ಟಿದ್ದರು. ಆರೋಪಿ ಸುಮನ್, ಬಿಜೋನ್‌ನ ಸ್ನೇಹಿತನಾಗಿದ್ದು, ಹಿಂದೆ ಇಬ್ಬರೂ ಅಂಡಮಾನ್ಗೆ ಕೆಲಸಕ್ಕೆ ಹೋಗಿದ್ದರು. 15 ದಿನಗಳ ಹಿಂದೆ ಸುಮನ್ ಮರುಬಂದಿದ್ದ.
ಮಂಗಳವಾರ ಸಂಜೆ ಮಂದಿರನ ಮನೆಗೆ ಭೇಟಿ ನೀಡಿದ ಸುಮನ್, ಗಲಾಟೆಯ ಮಧ್ಯೆ ಚಾಕುವಿನಿಂದ ಕತ್ತು ಸೀಳಿ ಮಹಿಳೆಯನ್ನು ಹತ್ಯೆಮಾಡಿದ್ದ. ಬಳಿಕ ತನ್ನ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.