ವರದಿ , ಎಡತೊರೆ ಮಹೇಶ್
ಎಚ್ ಡಿ ಕೋಟೆ : ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರ ಸಮನ್ವಯತೆ ಇದ್ದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದಕ್ಕೆ ಅಣ್ಣೂರು ಗ್ರಾಮ ಪಂಚಾಯಿತಿ ಉತ್ತಮ ಉದಾಹರಣೆಯಾಗಿದೆ ಅಣ್ಣೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಡತೊರೆ ಮಹೇಶ್ ಹೇಳಿದರು.
ಅಬ್ದುಲ್ ಅಜಿತ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಿಂದ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರಿಗೆ ಏರ್ಪಡಿಸಿರುವ ಅಧಿಕಾರ ಸಾಕಾರ ತರಬೇತಿಯ ಭಾಗವಾಗಿ ಕ್ಷೇತ್ರ ಅಧ್ಯಯನಕ್ಕಾಗಿ ಹುಣಸೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಂದ ಆಗಮಿಸಿದ ಮಹಿಳಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರೊಂದಿಗೆ ನಡೆಸಲಾದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಅಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಹಮ್ಮಿಕೊಳ್ಳಲಾದ ಅಭಿವೃದ್ಧಿ ಪ್ರಕ್ರಿಯೆಗಳ ಕುರಿತು ಪಿಡಿಒ ಸಂತೋಷ್ ನಾಗ ರವರು ಮಾಹಿತಿ ನೀಡಿದರು.

ನಂತರ ಗ್ರಾಮ ಪಂಚಾಯಿತಿಯ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳ ರಾಜಾ ಹುಣಸೂರು ರವರು ಪಂಚಾಯಿತಿಗಳ ಅಭಿವೃದ್ಧಿಯ ವೇಗಕ್ಕೆ ಸರ್ಕಾರವಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ಭಾಗವಹಿಸುವಿಕೆಯು ಬಹು ಮುಖ್ಯವಾಗಿದೆ. ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯತೆ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಾಂಸ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪೀಪಲ್ ಟ್ರೀ ಸಂಸ್ಥೆಯು ನಡೆಸುತ್ತಿರುವ ಹವಾಮಾನ ಕ್ರಿಯಾ ಚಟುವಟಿಕೆಯ ಕುರಿತು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದ ಜನರ ಬಹು ಮುಖ್ಯ ಕಸುಬಾಗಿರುವ ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಬಹು ಮುಖ್ಯ ಪಾತ್ರವನ್ನು ವಹಿಸಬೇಕಿದೆ ಕೃಷಿಯನ್ನು ಕೇವಲ ಕೆಲಸವೆಂದು ಮಾಡದೆ ಅದನ್ನು ಒಂದು ಉದ್ಯಮವನ್ನಾಗಿ ರೂಪಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿ ಸದಸ್ಯರ ಮೇಲಿದೆ. ಪಂಚಾಯತಿ ವ್ಯಾಪ್ತಿಯ ಯುವಕರು ಮತ್ತು ಮಹಿಳೆಯರ ಗುಂಪುಗಳನ್ನು ಬಳಸಿಕೊಂಡು ಕೃಷಿಗೆ ಪೂರಕವಾದ ಉದ್ಯಮಗಳನ್ನು ಆರಂಭಿಸಲು ಕಾರ್ಯತಂತ್ರ ರೂಪಿಸಿದರೆ ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಆರ್ ಡಿ ಸಂಪನ್ಮೂಲ ವ್ಯಕ್ತಿ ನಿಖಿಲೇಶ್ ನೇರಳಕುಪ್ಪೆ , ಪೀಪಲ್ ಟ್ರೀ ಸಂಸ್ಥೆಯ ಸಂಯೋಜಕರಾದ ಜವರೇಗೌಡ ಅಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಧಿಕಾರಿ ವೃಂದದವರು ಭಾಗವಹಿಸಿದ್ದರು.



